ನವದೆಹಲಿ: ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರವು ನಾಗರಿಕ ಅಣು ಕ್ಷೇತ್ರದಲ್ಲಿ ಖಾಸಗಿ ಯವರಿಗೂ ಅವಕಾಶ ನೀಡುವಂಥ ವಿಧೇಯಕಸೇರಿ 10 ವಿವಿಧ ಮಸೂದೆಗಳ ಅಂಗೀಕಾರಕ್ಕೆ ಸಜ್ಜಾಗಿದೆ. ಆದರೆ, ಪ್ರತಿಪಕ್ಷಗಳು ದೇಶದ 12 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಮತಕಳವು ವಿಚಾರ ಮುಂದಿಟ್ಟುಕೊಂಡು ತೀವ್ರ ಗದ್ದಲ ನಡೆಸುವ ಸಾಧ್ಯತೆ ಇದೆ.
ಕಳೆದ ಬಾರಿಯ ಮಾನ್ಸೂನ್ ಅಧಿವೇಶನದ ಹೆಚ್ಚಿನ ಕಲಾಪವು ಆಪರೇಷನ್ ಸಿಂದೂರ ಹಾಗೂ ಮತಪಟ್ಟಿ ಪರಿಷ್ಕರಣೆ ವಿಷಯಗಳ ಕಾರಣ, ಪ್ರತಿಪಕ್ಷಗಳ ಗದ್ದಲ ದಿಂದಾಗಿ ವ್ಯರ್ಥವಾಗಿತ್ತು. ಆದರೆ ಇದೀಗ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಅಭೂತಪೂರ್ವ ಗೆಲುವಿನಿಂದ ಬೀಗುತ್ತಿರುವ ಎನ್ಡಿಎ ಮೈತ್ರಿಕೂಟ, ಈ ಅಧಿವೇಶನದಲ್ಲಿ ತನ್ನ ಸುಧಾರಣಾ ನೀತಿಗಳನ್ನು ಇನ್ನಷ್ಟು ಗಟ್ಟಿ ಧ್ವನಿಯಲ್ಲಿ ಪ್ರಸ್ತುತ ಪಡಿಸುವ ನಿರೀಕ್ಷೆ ಇದೆ.
ಈ ನಡುವೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಎಲ್ಲಾ ಪಕ್ಷಗಳ ಸಂಸದೀಯ ನಾಯಕರ ಜತೆಗೆ ಮಾತುಕತೆ ನಡೆಸಿದ್ದು, ಕಲಾಪವನ್ನು ಸುಗಮವಾಗಿ ನಡೆಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಎಸ್ಐಆರ್ ವಿಚಾರದಲ್ಲಿ ಗದ್ದಲ: ಕಳೆದ ಬಾರಿ ಯಂತೆ ಈ ಬಾರಿಯೂ ಕಾಂಗ್ರೆಸ್ ಹಾಗೂ ಇತರೆ ಸರ್ವಪಕ್ಷ ಸಭೆಯಲ್ಲಿ ವಿಪಕ್ಷ ಸಂಸದರ ಜತೆ ರಿಜಿಜು
ಪ್ರತಿಪಕ್ಷಗಳು ಮತಗಳವು ಹಾಗೂ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಕಳೆದ ಅಧಿವೇಶನದಲ್ಲಿ ಬಿಹಾರದಲ್ಲಿ ನಡೆಯುತ್ತಿದ್ದ ಎಸ್ಐಆರ್ ಅನ್ನು ಕಾಂಗ್ರೆಸ್ ನೇತೃತ್ವ ದಲ್ಲಿ ಪ್ರತಿಪಕ್ಷಗಳು ಬಹಿರಂಗವಾಗಿ ವಿರೋಧಿಸಿದ್ದವು. ಇದೀಗ ದೇಶಾದ್ಯಂತ ಎಸ್ಐಆರ್ಗೆ ಚಾಲನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮತ್ತೆ ಈ ವಿಚಾರವಾಗಿ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವ ನಿರೀಕ್ಷೆ ಇದೆ.


