ಬೆಳಗಾವಿ : ಬೆಳಗಾವಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರು ನಡೆಸಿರುವ ಚಳುವಳಿಗಳು, ಭಾಷಾ ಸಂಘರ್ಷ ಸೇರಿದಂತೆ ಬೆಳಗಾವಿಯ ಸಮಗ್ರ ಇತಿಹಾಸ ವನ್ನು ಈ ಪುಸ್ತಕ ಒಳಗೊಂಡಿದೆ. ಹೀಗಾಗಿ ಪ್ರತಿಯೊಬ್ಬ ಕನ್ನಡಿಗರು ಬೆಳಗಾವಿ ಒಂದು ಅಧ್ಯಯನ” ಎಂಬ ಪುಸ್ತಕವನ್ನು ಓದಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹೇಳಿದರು.
ಬೆಳಗಾವಿ ಜನಸಾಹಿತ್ಯ ಪೀಠ, ಕವಿ ಎಸ್. ಡಿ. ಇಂಚಲ ಮತ್ತು ಕವಿ ಉಳುವೀಶ ಹುಲೆಪ್ಪನವರಮಠ ಸ್ಮಾರಕ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ನಡೆದ ಪ್ರಾ. ಬಿ. ಎಸ್. ಗವಿಮಠ ಅವರ ಸಂಪಾದಿತ ” ಬೆಳಗಾವಿ ಒಂದು ಅಧ್ಯಯನ” ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ದೊಡ್ಡ ಪ್ರಮಾಣದಲ್ಲಿ ಸಂಘರ್ಷ ಏರ್ಪಡುತ್ತಿತ್ತು. ಆದರೆ, ಕಾಲಕ್ರಮೇಣ ಬಹಳಷ್ಟು ಬದಲಾವಣೆಯಾಗಿದೆ. ರಾಜ್ಯದಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಬೆಳಗಾವಿ ಮಾದರಿಯಾಗಿದೆ. ಅಲ್ಲದೆ, ಬೆಳಗಾವಿಯಲ್ಲಿ ಈಗ ಎಲ್ಲಾ ಭಾಷಿಕರು ಅನೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಪ್ರವೃತ್ತಿ ಹೀಗೆ ಮುಂದುವರೆಯುವುದು ಅಗತ್ಯವಾಗಿದೆ ಎಂದರು.
ಗುರುಗಳ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕನ್ನಡ ಹೋರಾಟ ಕಂಡ ಗವಿಮಠ ಅವರು ಅಪಾರ ಅನುಭವದ ಕಣಜವಾಗಿದ್ದಾರೆ ಎಂದು ಹೇಳಿದರು.
ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ. ಬೆಳಗಾವಿ ಕರ್ನಾಟಕ ರಾಜ್ಯದಲ್ಲಿ ಉಳಿಯಬೇಕು ಎಂಬ ಹೋರಾಟ ಈ ಪುಸ್ತಕದಲ್ಲಿ ಇದ್ದು ಪ್ರತಿಯೊಬ್ಬ ಕನ್ನಡಿಗರು ಪುಸ್ತಕ ಓದಿ ಎಂದು ಸಲಹೆ ನೀಡಿದರು.
ಬೆಳಗಾವಿಯಲ್ಲಿ ಈಗ
ಬದಲಾವಣೆ ಸಾಕಷ್ಟು ಆಗಿದೆ. ಗದ್ದಲ, ಗಲಾಟೆ ಕಡಿಮೆ ಆಗಿದೆ. ಆರ್ ಸಿಯು, ವಿಟಿಯು, ಸುವರ್ಣ ಸೌಧ ನಿರ್ಮಾಣವಾಗಿದೆ. ಕನ್ನಡ ಕಡ್ಡಾಯವಾಗಿದೆ. ಬೆಳಗಾವಿ ಬದಲಾಗಿದೆ. ಅದ್ದೂರಿ ರಾಜ್ಯೋತ್ಸವ ಆಚರಣೆ ಆಗುತ್ತಿದೆ ಎಂದು ಹೇಳಿದರು.
ನಿಪ್ಪಾಣಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯಾಗುತ್ತಿದ್ದು, ಕನ್ನಡ ಹಾಡುಗಳನ್ನು ಮರಾಠಿ ಭಾಷಿಕರು ಹಾಡುತ್ತಿದ್ದಾರೆ. ಹಿಂದೆ ಬೆಳಗಾವಿ ಜಿಲ್ಲೆಯಿಂದ ಐದು ಜನ ಎಂಇಎಸ್ ಎಂಎಲ್ಎ ಇದ್ದರು. ಈಗ ಯಾರೂ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಈಗ ಕನ್ನಡಿಗರು ಹಾಗೂ ಮರಾಠಿಗರು ಅನ್ಯೋನ್ಯತೆಯಿಂದ ಇದ್ದಾರೆ. ಬದಲಾವಣೆ ಕಾಣುತ್ತಿದೆ.
ಮರಾಠ ಮಂಡಳ ಶಿಕ್ಷಣ ಸಂಸ್ಥೆ ಕನ್ನಡ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿದೆ.ಸಂವಿಧಾನ ಎಲ್ಲರಿಗೂ ರಕ್ಷಣೆ ನೀಡುತ್ತದೆ. ಕರ್ನಾಟಕದಲ್ಲಿ ಅಧಿಕಾರಿಗಳಾಗಲು ಕನ್ನಡ ಕಲಿಯಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಬಿ. ಎಸ್. ಗವಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಹಳ ಪರಿಶ್ರಮದಿಂದ ಈ ಪುಸ್ತಕವನ್ನು ಬರೆದಿದ್ದೇನೆ. ಈ ಪುಸ್ತಕ ಲೋಕಾರ್ಪಣೆ ಯಾಗಿರುವುದು ಬಹಳ ಸಂತಸ ತಂದಿದೆ. ಪ್ರತಿಯೊಬ್ಬರೂ ಈ ಪುಸ್ತಕ ಓದುವ ಮೂಲಕ ಅದರಲ್ಲಿರುವ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು.
ಇದೇ ವೇಳೆ ಪುಸ್ತಕದ ಕರ್ತೃ ಪ್ರಾ. ಬಿ.ಎಸ್.ಗವಿಮಠ ಅವರನ್ನು ಗಣ್ಯರು ಸನ್ಮಾನಿಸಿದರು. ಸಾಹಿತಿಗಳಾದ ಡಾ. ವಿಸ್. ಮಾಳಿ ಹಾಗೂ ಡಾ. ಗುರುದೇವಿ ಹುಲೆಪ್ಪನವರಮಠ ಅವರು “ಬೆಳಗಾವಿ ಒಂದು ಅಧ್ಯಯನ” ಪುಸ್ತಕ ಕುರಿತು ವಿವರಿಸಿದರು.
ಡಾ. ಎಚ್.ಬಿ. ರಾಜಶೇಖರ ಅವರು ಅಧ್ಯಕ್ಷೆಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶಂಕರರಾವ್ ಬುಚಡಿ, ಷಣ್ಮುಖ ಗಣಾಚಾರಿ, ಎಂ. ಎಸ್. ಇಂಚಲ್ ಉಪಸ್ಥಿತರಿದ್ದರು. ಸಾಹಿತಿ ನಯನಾ ಗಿರಿಗೌಡರ ಪ್ರಾಥಿಸಿದರು. ಸಾಹಿತಿ ಡಾ. ಬಸವರಾಜ ಜಗಜಂಪಿ ಸ್ವಾಗತಿಸಿದರು. ಡಾ. ಮಹೇಶ ಗರುನಗೌಡರ ನಿರೂಪಿಸಿದರು. ಸಾಹಿತಿ ಬಸವರಾಜ ಗಾರ್ಗಿ ವಂದಿಸಿದರು.


