ಹಾಂಗ್ ಕಾಂಗ್: ಹಾಂಗ್ ಕಾಂಗ್ನ ಎತ್ತರದ ವಸತಿ ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 44 ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಶಕಗಳಲ್ಲಿ ಹಾಂಗ್ ಕಾಂಗ್ ಕಂಡ ಅತ್ಯಂತ ಭೀಕರ ಬೆಂಕಿಯ ಘಟನೆ ಇದಾಗಿದೆ. ಇದು ಬುಧವಾರ ಮಧ್ಯಾಹ್ನ 2,000 ಅಪಾರ್ಟ್ಮೆಂಟ್ಗಳನ್ನು ಹೊಂದಿರುವ ಎಂಟು ಕಟ್ಟಡಗಳ ವಸತಿ ಪ್ರದೇಶದಲ್ಲಿ ಪ್ರಾರಂಭವಾಯಿತು. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಇರುವ ಮತ್ತು ಅತಿ ಎತ್ತರದ ವಸತಿ ಕಟ್ಟಡಗಳನ್ನು ಹೊಂದಿರುವ ನಗರಕ್ಕೆ ಈ ಘಟನೆ ಆಘಾತ ಮೂಡಿಸಿದೆ.
ನಿರ್ವಹಣಾ ಕಾರ್ಯದ ಸಂದರ್ಭದಲ್ಲಿ ಬಿಟ್ಟಿದ್ದ ದಹನಕಾರಿ ವಸ್ತುಗಳಿಂದಾಗಿ ಬೆಂಕಿ “ವೇಗವಾಗಿ ಹರಡಿ ನಿಯಂತ್ರಣ ಮೀರಿತು” ಎಂದು ಪೊಲೀಸರು ತಿಳಿಸಿದ್ದಾರೆ. ಈ ಬೆಂಕಿಗೆ ಸಂಬಂಧಿಸಿದಂತೆ ಗುರುವಾರ ಮುಂಜಾನೆ ಮೂರು ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪೊಲೀಸರು ಶಂಕಿಸಿರುವಂತೆ, ಬಂಧಿತ ಮೂವರು ಆರೋಪಿಗಳು ಬೆಂಕಿ ಹೊತ್ತಿಕೊಂಡ ಸ್ಥಳದಲ್ಲಿ ಫೋಮ್ ಪ್ಯಾಕೇಜಿಂಗ್ ವಸ್ತುವನ್ನು ಬಿಡುವ ಮೂಲಕ “ತೀವ್ರ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ”. ಈ ಸಂಬಂಧ ಪೊಲೀಸರು ಗುರುವಾರ ಬೆಳಿಗ್ಗೆ ಮತ್ತೊಂದು ಪ್ರದೇಶದಲ್ಲಿ ಶೋಧ ನಡೆಸಿ, ಬಂಧಿತ ಮೂವರಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಬುಧವಾರ ಉತ್ತರ ಜಿಲ್ಲೆಯ ತೈ ಪೋದಲ್ಲಿನ ವಾಂಗ್ ಫುಕ್ ಕೋರ್ಟ್ನ 31 ಅಂತಸ್ತಿನ ಹಲವಾರು ಅಪಾರ್ಟ್ಮೆಂಟ್ ಬ್ಲಾಕ್ಗಳ ಬಿದಿರಿನ ಸ್ಕ್ಯಾಫೋಲ್ಡಿಂಗ್ಗಳ ಮೇಲೆ ತೀವ್ರವಾದ ಜ್ವಾಲೆಗಳು ಮೊದಲು ಕಾಣಿಸಿಕೊಂಡವು. ಈ ಸಂಕೀರ್ಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು.
ನಾಲ್ಕು ದಶಕಗಳಿಂದ ಈ ಸಂಕೀರ್ಣದಲ್ಲಿ ವಾಸಿಸುತ್ತಿರುವ ಯೂನ್ ಎಂಬ 65 ವರ್ಷದ ನಿವಾಸಿಯೊಬ್ಬರು, ತಮ್ಮ ಅನೇಕ ನೆರೆಹೊರೆಯವರು ವೃದ್ಧರಾಗಿದ್ದು ಓಡಾಡಲು ಸಾಧ್ಯವಿಲ್ಲ ಎಂದಿದ್ದಾರೆ. “ನಿರ್ವಹಣಾ ಕಾರ್ಯದಿಂದಾಗಿ ಕಿಟಕಿಗಳು ಮುಚ್ಚಲ್ಪಟ್ಟಿದ್ದವು, (ಕೆಲವರಿಗೆ) ಬೆಂಕಿ ಹತ್ತಿರುವುದು ತಿಳಿದಿರಲಿಲ್ಲ. ನೆರೆಹೊರೆಯವರ ಫೋನ್ ಕರೆಗಳ ಮೂಲಕ ತಾವು ಅವರಿಗೆ ಹೇಳಿ ಸ್ಥಳಾಂತರಿಸಬೇಕಾಯಿತು” ಎಂದು ಯೂನ್ ಎಎಫ್ಪಿ ಜೊತೆ ಹೇಳಿಕೊಂಡಿದ್ದಾರೆ.
ಹಾಂಗ್ ಕಾಂಗ್ನ ಅಗ್ನಿಶಾಮಕ ಇಲಾಖೆ ಗುರುವಾರ ಬೆಳಿಗ್ಗೆ ಸಾವಿನ ಸಂಖ್ಯೆಯನ್ನು 44 ಎಂದು ಹೇಳಿದೆ. ಸತ್ತವರಲ್ಲಿ 37 ವರ್ಷದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಸೇರಿದ್ದಾರೆ. ಸಹೋದ್ಯೋಗಿಗಳೊಂದಿಗೆ ಸಂಪರ್ಕ ಕಳೆದುಕೊಂಡ ಅರ್ಧ ಗಂಟೆಯ ನಂತರ ಅವರ ಮುಖದ ಮೇಲೆ ಸುಟ್ಟ ಗಾಯಗಳೊಂದಿಗೆ ಪತ್ತೆಯಾದರು ಎಂದು ಅಗ್ನಿಶಾಮಕ ಸೇವೆಗಳ ನಿರ್ದೇಶಕ ಆಂಡಿ ಯೆಂಗ್ ತಿಳಿಸಿದ್ದಾರೆ.
ಒಟ್ಟು 56 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 16 ಜನರ ಸ್ಥಿತಿ ಚಿಂತಾಜನಕವಾಗಿದೆ, 24 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು 16 ಜನರು ಸ್ಥಿರವಾಗಿದ್ದಾರೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.
ನಗರದ ನಾಯಕ ಜಾನ್ ಲೀ ಅವರು ಗುರುವಾರ ಮುಂಜಾನೆ 279 ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದರು. ಆದರೆ ನಂತರ ಅಗ್ನಿಶಾಮಕ ದಳದವರು ನಾಪತ್ತೆಯಾದವರಲ್ಲಿ ಕೆಲವರೊಂದಿಗೆ ಸಂಪರ್ಕ ಸಾಧಿಸಿದ್ದಾರೆ. 900 ಕ್ಕೂ ಹೆಚ್ಚು ಜನರು ತಾತ್ಕಾಲಿಕ ಆಶ್ರಯ ತಾಣಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಲೀ ಹೇಳಿದ್ದಾರೆ.
ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಸಂತ್ರಸ್ತರಿಗೆ ಸಂತಾಪ ಸೂಚಿಸಿದ್ದಾರೆ. ನಗರದ ನಾಯಕ ಲೀ ಅವರು ” ಈ ಘಟನೆಯಿಂದ ತೀವ್ರ ದುಃಖಿತರಾಗಿದ್ದು”, ಬೆಂಕಿಯಿಂದ ಸಂತ್ರಸ್ತರಾದ ನಿವಾಸಿಗಳಿಗೆ ಎಲ್ಲಾ ಸರ್ಕಾರಿ ಇಲಾಖೆಗಳು ನೆರವು ನೀಡುತ್ತಿವೆ ಎಂದು ತಿಳಿಸಿದ್ದಾರೆ.


