ನವದೆಹಲಿ: ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಸೋಮವಾರ ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಹಾಲಿ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್. ಗವಾಯಿ ನವೆಂಬರ್ 23ರಂದು ನಿವೃತ್ತರಾದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಈ ಉನ್ನತ ಹುದ್ದೆಯನ್ನು ವಹಿಸಿಕೊಂಡಿದ್ದು. ನ್ಯಾಯಮೂರ್ತಿ ಸೂರ್ಯಕಾಂತ್ 15 ತಿಂಗಳ (ಫೆಬ್ರವರಿ 9, 2027) ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ 370 ನೇ ವಿಧಿ ತೆರವು, ಬಿಹಾರ ಚುನಾವಣೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ, ಪೆಗಾಸಸ್ ಸ್ಪೈವೇರ್ ಸೇರಿ ಹಲವಾರು ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ಮೂಲತಃ ಹರ್ಯಾಣದ ಹಿಸಾರ್ ಜಿಲ್ಲೆಯವರಾದ ನ್ಯಾ. ಸೂರ್ಯಕಾಂತ್ ಅವರು ಸಣ್ಣ ಪಟ್ಟಣದಿಂದ ಬೆಳೆದು ಬಂದು ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನವನ್ನು ಏರಿದ್ದಾರೆ.
ಬಿ.ಆರ್. ಗವಾಯಿ ಅವರ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್ ಅವರನ್ನು ನೇಮಕ ಮಾಡುವಂತೆ ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ಅಕ್ಟೋಬರ್ 30 ರಂದು ನೇಮಕ ಮಾಡಲಾಯಿತು.
ಸುಪ್ರೀಂ ಕೋರ್ಟ್ನ ನ್ಯಾಯ ಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ. 9ರಂದು ನಿವೃತ್ತಿಯಾಗಲಿದ್ದಾರೆ. ಇವರು ಸುಮಾರು 15 ತಿಂಗಳವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಅವರ ಆರಂಭಿಕ ಜೀವನ
ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಹರಿಯಾಣದ ಹಿಸ್ಸಾರ್ ಜಿಲ್ಲೆಯ ಪೆಟ್ವಾರ್ ಗ್ರಾಮದಲ್ಲಿ 1962ರ ಫೆಬ್ರುವರಿ 10ರಂದು ಜನಿಸಿದರು.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅವರು, ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.
‘ನನ್ನ ಶಾಲಾ ಶಿಕ್ಷಣ ಸರ್ಕಾರಿ ಶಾಲೆಯಲ್ಲೇ ಆಗಿತ್ತು. ಶಾಲೆ ಬಿಟ್ಟ ನಂತರ ಬಿಡುವಿನ ಅವಧಿಯಲ್ಲಿ ಗದ್ದೆಗಳಲ್ಲಿ ದುಡಿಯುತ್ತಿದ್ದೆ’ ಎಂದು ಅವರು ಇತ್ತೀಚೆಗೆ ನೆನಪಿಸಿಕೊಂಡಿದ್ದರು. ಕೃಷಿ ಕ್ಷೇತ್ರದಲ್ಲಿ ಗ್ರಾಮಸ್ಥರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರಿಂದ ಜೀವನದ ಬಗ್ಗೆ ಅನೇಕ ಪಾಠಗಳನ್ನು ಕಲಿಯಲು ಸಾಧ್ಯವಾಯಿತು‘ ಎಂದು ಹೇಳಿಕೊಂಡಿದ್ದರು.
ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ದಲ್ಲಿ ಕೆಲ ಸಮಯದ ಹಿಂದೆ ಉಪನ್ಯಾಸ ನೀಡಿದ್ದ ನ್ಯಾ. ಸೂರ್ಯ ಕಾಂತ್ ಅವರು ಹಳ್ಳಿಯ ಕಷ್ಟದ ಜೀವನದ ಬಗ್ಗೆ ತಿಳಿಸಿದ್ದರು.
‘ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದ ಹಳ್ಳಿಯ ಶಾಲೆಯಲ್ಲಿ ಸರಿಯಾದ ಬೆಂಚುಗಳೇ ಇರಲಿಲ್ಲ. ಗ್ರಾಮದಲ್ಲಿ ವಿದ್ಯುತ್ ಸೌಲಭ್ಯವೂ ಸಮರ್ಪಕ ಆಗಿರಲಿಲ್ಲ. ಬುಡ್ಡಿ ದೀಪದ ಬೆಳಕಿನಲ್ಲಿ ಗೆಳೆಯರ ಜತೆಗೂಡಿ ಅಧ್ಯಯನ ನಡೆಸುತ್ತಿದ್ದೆ. ಸರ್ಕಾರಿ ಉದ್ಯೋಗ ಪಡೆಯುವುದೇ ನಮ್ಮೆಲ್ಲರ ಗುರಿಯಾಗಿತ್ತು’ ಎಂದು ನೆನಪಿಸಿಕೊಂಡಿದ್ದರು.
ವೃತ್ತಿ ಜೀವನ
ಹಿಸ್ಸಾರ್ ಜಿಲ್ಲೆಯ ಪೆಟ್ವಾರ್ ಗ್ರಾಮದಲ್ಲಿ 1962ರ ಫೆಬ್ರುವರಿ 10ರಂದು ಜನನ
ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ 1984ರಲ್ಲಿ ಎಲ್ಎಲ್ಬಿ ಪದವಿ
ಆರಂಭದಲ್ಲಿ ಹಿಸ್ಸಾರ್ನ ನ್ಯಾಯಾಲಯದಲ್ಲಿ ವಕೀಲಿಕೆ. ಬಳಿಕ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನಲ್ಲಿ ವಕೀಲ ವೃತ್ತಿ
38ನೇ ವಯಸ್ಸಿನಲ್ಲೇ ಹರಿಯಾಣದ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಣೆ
42ನೇ ವಯಸ್ಸಿನಲ್ಲಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿನೇಮಕ. ಅಲ್ಲಿ 14 ವರ್ಷಗಳ ಕಾಲ ಸೇವೆ.
2018ರ ಅಕ್ಟೋಬರ್ 5ರಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ
2019ರ ಮೇ 4ಕ್ಕೆ ‘ಸುಪ್ರೀಂ’ ನ್ಯಾಯಮೂರ್ತಿಯಾಗಿ ಬಡ್ತಿ.
ಪ್ರಮುಖ ತೀರ್ಪುಗಳು
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇವುಗಳಲ್ಲಿ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಹಾಗೂ ಲಿಂಗ ಸಮಾನತೆ ಪ್ರಕರಣಗಳು ಸೇರಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದರು. ವಸಾಹತು ಯುಗದ ದೇಶದ್ರೋಹ ಕಾನೂನಿಗೆ ತಡೆ ನೀಡಿದ್ದ ಪೀಠದಲ್ಲಿದ್ದರು
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಹೆಸರುಗಳ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ಬಾರ್ ಅಸೋಸಿಯೇಷನ್ಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡ ಬೇಕೆಂದು ನಿರ್ದೇಶಿಸಿದ ಕೀರ್ತಿಯೂ ನ್ಯಾ. ಸೂರ್ಯ ಕಾಂತ್ ಅವರಿಗೆ ಸಲ್ಲುತ್ತದೆ.
1967ರ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ತೀರ್ಪನ್ನು ರದ್ದುಗೊಳಿಸಿದ ಏಳು ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿ ಸೂರ್ಯ ಕಾಂತ್ ಇದ್ದರು.


