ವಿಜಯಪುರ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪುರ ಅವರಿಗೆ ರಾಜ್ಯ ಕಾರ್ಯಕಾರಣಿ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ‘ಕಾರಣ ಕೇಳಿ ನೋಟಿಸ್’ ನೀಡಲಾಗಿದೆ. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ (ಆಡಳಿತ) ಬಾಹುಬಲಿ ಅವರು ಈ ನೋಟಿಸ್ ಜಾರಿ ಮಾಡಿದ್ದಾರೆ.
ನವೆಂಬರ್ 16ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಉಸ್ತುವಾರಿ ಮನೀಶ್ ಶರ್ಮಾ, ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಗಮ್ ಭಂಡಾರಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಪಾಲ್ಗೊಂಡಿದ್ದರು. ಇಂತಹ ಪ್ರಮುಖ ಸಭೆಗೆ ವಿನಯ್ ತಿಮ್ಮಾಪುರ ಅವರು ಗೈರು ಹಾಜರಾಗಿರುವುದು ಕಂಡುಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಯುವ ಕಾಂಗ್ರೆಸ್ ಆದೇಶದಂತೆ ನಡೆದ ಈ ಸಭೆಗೆ ಹಾಜರಾಗದ ಕುರಿತು ನಾಲ್ಕು ದಿನಗಳ ಒಳಗೆ ಸಮಜಾಯಿಷಿ ನೀಡುವಂತೆ ವಿನಯ್ ತಿಮ್ಮಾಪುರ ಅವರಿಗೆ ಸೂಚಿಸಲಾಗಿದೆ. ಪಕ್ಷದ ಶಿಸ್ತು ಮತ್ತು ಸಂಘಟನೆಯ ದೃಷ್ಟಿಯಿಂದ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.


