ಬೆಳಗಾವಿ : ಇಲ್ಲಿಯ ಪ್ರತಿಷ್ಠಿತ ಸುತಾರಿಯಾ ಡೀಲರ್ಸ್ ಗ್ರಾಹಕರನ್ನು ಇನ್ನಿಲ್ಲದಂತೆ ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಳಗಾವಿಯ ಮಧ್ಯಮ ವರ್ಗದ ಗ್ರಾಹಕರೊಬ್ಬರು ಜೀವನದಲ್ಲಿ ಹಲವಾರು ಕನಸು ಇಟ್ಟುಕೊಂಡು ತಮ್ಮ ಅಚ್ಚುಮೆಚ್ಚಿನ ವಾಹನವನ್ನು ಖರೀದಿಸುವ ತವಕದಲ್ಲಿ ವಾಹನ ಖರೀದಿಸಿ ಈಗ ಬೆಸ್ತು ಬಿದ್ದಿದ್ದಾರೆ.
ಪ್ರತಿದಿನ ಸುತಾರಿಯ ಕಡೆಗೆ ಪ್ರಯಾಣ ಬೆಳೆಸಿ ವ್ಯರ್ಥ ಸಮಯ ಹಾಳು ಮಾಡುವ ಸ್ಥಿತಿ ಬಂದೊದಗಿದೆ. ಇಡೀ ಕುಟುಂಬ ತಮ್ಮ ಜೀವನದಲ್ಲಿ ಸಾಲ ಸೋಲ ಮಾಡಿ ಇತರರಿಗಿಂತ ವಿಭಿನ್ನವಾದ ವಾಹನ ಹೊಂದುವ ಕನಸು ಇಟ್ಟುಕೊಂಡು ವಾಹನ ಖರೀದಿಸಿ ಈಗ ತೊಂದರೆಯಲ್ಲಿ ಸಿಲುಕಿರುವ ಪ್ರಕರಣ ಇದಾಗಿದೆ.
ವಾಹನ ಖರೀದಿಯ ಸಂದರ್ಭದಲ್ಲಿ ಅದರ ಮುಖ್ಯ ಕೀಲಿ ಕೈಯನ್ನು ಗ್ರಾಹಕರಿಗೆ ನೀಡಬೇಕಾಗಿತ್ತು. ಆದರೆ ಈ ಮುಖ್ಯ ಕೀಲಿ ಕೈಯನ್ನು ಕೊಡದ ಸುತಾರಿಯ ಈಗ ತನಗೂ ಗ್ರಾಹಕರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ತನ್ನ ನೈಜ ಜವಾಬ್ದಾರಿಯನ್ನು ಮರೆತಿರುವ ಸುತಾರಿಯ ಅದು ತನ್ನ ಕೆಲಸವಲ್ಲ ಎಂಬಂತೆ ಒಬ್ಬರ ಮೇಲೆ ಮತ್ತೊಬ್ಬರತ್ತ ಕೈ ತೋರಿಸುವ ಜಾಣ ನಡೆ ಅನುಸರಿಸುತ್ತಿದೆ.
ಇದರಿಂದ ಗ್ರಾಹಕರು ತೀವ್ರ ಹೈರಾಣಾಗಿ ಮನ ನೊಂದಿದ್ದು ತಾವು ಯಾಕಾದರೂ ಬೆಳಗಾವಿಯ ಸುತಾರಿಯದಿಂದ ವಾಹನ ಖರೀದಿಸಿದ್ದೆವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದ ವಿವರ:
ಬೆಳಗಾವಿ ಮಹೇಂದ್ರ ಸುತಾರಿಯಾ (ಪ್ಯಾಟ್ಸನ್ ಎದುರು) ದಿನಾಂಕ 1-10-2025 ರಂದು THAR ROXX ವಾಹನವನ್ನು ಪಡೆದುಕೊಂಡಿದ್ದೆ. ಆದರೆ ಕಂಪನಿ Main Key ಕೊಡದೆ ನನ್ನನ್ನು ಸತಾಯಿಸುತ್ತಿದೆ ಎಂದು ಗ್ರಾಹಕರೊಬ್ಬರು ದೂರಿದ್ದಾರೆ.
ಈ ಬಗ್ಗೆ ನಾನು ಥಾರ್ ಕಂಪನಿಯ ಕಸ್ಟಮರ್ ಕೇರ್ ಗೆ ಹಲವು ಬಾರಿ ಮೇಲ್ ಮಾಡಿದಾಗ ಅವರು ನಮ್ಮ ತಪ್ಪಿನಿಂದ ಆಗಿದ್ದು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಉತ್ತರ ನೀಡಿದ್ದಾರೆ. ನಾವು ನಿಮಗೆ ಸಂಬಂಧಪಟ್ಟ ಏರಿಯಾ ಮ್ಯಾನೇಜರ್ ಅವರಿಗೆ ತಿಳಿಸುತ್ತೇವೆ ಎಂದು ಹತ್ತು ಬಾರಿ ಹೇಳಿದ್ದಾರೆ ! ಆದರೆ ಬೆಳಗಾವಿಯ ಸುತಾರಿಯಾ ಮ್ಯಾನೇಜರ್ ಬಳಿ ನಾವು 21-10-2025 ರಂದು ಹೋಗಿ ಕೇಳಿದಾಗ ನನ್ನ ಗಮನಕ್ಕೆ ಇವತ್ತು ಈ ವಿಷಯ ಗಮನಕ್ಕೆ ಬಂದಿದೆ. ನಾನು ಇದರ ಬಗ್ಗೆ ಈಗ ಏನು ಮಾತನಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಾನು ನನ್ನ ಮೇನ್ ಕೀ ದುರುಪಯೋಗ ಆಗಬಹುದು ಎಂದು ಹಲವಾರು ಬಾರಿ ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಈ ಹಿಂದೆ ವಿಕ್ಟರ್ ಎಂಬ ಮ್ಯಾನೇಜರ್ ನಿಮಗೆ ಬೇರೆ ಕೀ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇಲ್ಲಿಯವರೆಗೆ ಅದು ಸಹಾ ನನಗೆ ದೊರೆತಿಲ್ಲ ಎಂದು ಗ್ರಾಹಕರು ದೂರಿದ್ದಾರೆ.
ನಾನು ಬ್ಯಾಂಕಿನ ಮೂಲಕ ಸಾಲ ಮಾಡಿ 24 ಲಕ್ಷ ರೂಪಾಯಿ ತೆಗೆದುಕೊಂಡಿದ್ದು ಈಗ ವಾಹನ ಕಂಪನಿ ನನ್ನ ಮೇಲೆಯೇ ಅಧಿಕಾರ ಚಲಾಯಿಸುತ್ತಿದ್ದಾರೆ ಮತ್ತು ಕರೆ ಮಾಡಿದರು ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ.
ಮುಂದಿನ ದಾರಿ..
ನಾನು ನಮ್ಮ ಕುಟುಂಬದ ಸದಸ್ಯರ ಬಹುದಿನಗಳ ಕನಸಿನಂತೆ ಈ ಐಷಾರಾಮಿ ವಾಹನವನ್ನು ಖರೀದಿಸಿದೆ. ಆದರೆ, ಆ ಖುಷಿ ಕ್ಷಣಿಕವಾಯಿತು. ನಮಗೆ ವಾಹನದ ಮುಖ್ಯ ಕೀಲಿ ಕೊಡದೆ ಅಲೆದಾಡಿಸುತ್ತಿದ್ದಾರೆ. ಗ್ರಾಹಕರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರ ತಂದಿದೆ. ಯಾಕಾದರೂ ಈ ಡೀಲರ್ಸ್ ಕಡೆಯಿಂದ ವಾಹನ ಖರೀದಿ ಮಾಡಿದ್ದೆವು ಎಂಬ ಚಿಂತೆಯಲ್ಲೇ ದಿನ ಕಳೆಯುತ್ತಿದ್ದೇವೆ. ಅಲೆದಾಟ ಸಾಕಾಗಿದೆ. ಕೊನೆಯ ಪ್ರಯತ್ನವಾಗಿ ನಾವು ಇನ್ನು ಮುಂದೆ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಕಟ್ಟೆ ಏರುವುದು ಮಾತ್ರ ಬಾಕಿ ಇದ್ದು ಆ ನಿಟ್ಟಿನಲ್ಲಿ ಕಾನೂನು ಸಲಹೆ ಪಡೆಯುತ್ತಿದ್ದೇವೆ.
* ಪ್ರಕಾಶ ಭಜಂತ್ರಿ, ವಾಹನ ಖರೀದಿದಾರ
ಗ್ರಾಹಕರನ್ನು ಇನ್ನಿಲ್ಲದಂತೆ ಸತಾಯಿಸುತ್ತಿರುವ ಸುತಾರಿಯಾ ಇಲ್ಲಿ ವಾಹನ ಖರೀದಿಸಿದರೆ ಜೋಕೆ..! THAR ROXX ವಾಹನ ಖರೀದಿಸಿ ಒಂದೂವರೆ ತಿಂಗಳು ಕಳೆದರೂ ವಾಹನದ Main Key ಕೊಡದೇ ಅಲೆದಾಡಿಸುತ್ತಿರುವ ಕಂಪನಿ


