ಬೆಳಗಾವಿ: ನೈರುತ್ಯ ರೈಲ್ವೆ ವಲಯದ ಮಹಾ ಪ್ರಬಂಧಕರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸೋಮವಾರ ಚರ್ಚಿಸಿ, ತಮ್ಮ ಕ್ಷೇತ್ರ ವ್ಯಾಪ್ತಿಯ ರೈಲ್ವೆ ಕಾಮಗಾರಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ಪ್ರಸ್ತಾಪಿತ ಬೆಳಗಾವಿ – ಕಿತ್ತೂರು – ಧಾರವಾಡ ನೂತನ ರೈಲು ಮಾರ್ಗದ ಕುರಿತು ಸಂಸದರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ‘ಧಾರವಾಡ ಬಳಿ 16 ಎಕರೆ ಜಮೀನು ಹೊರತುಪಡಿಸಿ, ಕಾಮಗಾರಿ ಆರಂಭಕ್ಕೆ ಅವಶ್ಯವಿರುವ ಭೂ ಸಮೀಕ್ಷೆ ಪೂರ್ಣಗೊಂಡಿದೆ. ರಾಜ್ಯ ಸರ್ಕಾರದಿಂದ ಭೂಮಿ ಹಸ್ತಾಂತರಗೊಂಡ ನಂತರ ಟೆಂಡರ್ ಕರೆದು ಶೀಘ್ರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ರೈಲ್ವೆ ವಲಯಕ್ಕೆ ಶೀಘ್ರವೇ ಭೂಮಿ ಹಸ್ತಾಂತರಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಂಸದರು ತಿಳಿಸಿದರು.
ಲೋಕಾಪುರ – ರಾಮದುರ್ಗ – ಸವದತ್ತಿ -ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಪೂರ್ವ ಸಮೀಕ್ಷೆ ಕಾರ್ಯಕ್ಕೆ ಅನುಮೋದನೆ ಪಡೆಯಲು ರೈಲ್ವೆ ಮಂಡಳಿ ಜೊತೆ ನಿರಂತರ ಸಂಪರ್ಕದಲ್ಲಿ ಇರುವಂತೆ ಅಧಿಕಾರಿಗಳಿಗೆ ಶೆಟ್ಟರ್ ಸೂಚಿಸಿದರು.
ಬೆಳಗಾವಿ ನಗರ ಲೆವಲ್ ಕ್ರಾಸಿಂಗ್ 381ರ ಹತ್ತಿರ ಎರಡನೇ ಲೈನ್ ಪ್ರಾರಂಭಕ್ಕೆ ಇರುವ ತೊಂದರೆ ನಿವಾರಿಸಲು ವಾಹನಗಳ ಓಡಾಟದ ಮಾರ್ಗ ಬದಲಾವಣೆಗೆ ಅಗತ್ಯ ಪರವಾನಗಿಯನ್ನು ಪೋಲಿಸ್ ಇಲಾಖೆಯಿಂದ ಪಡೆಯಲು ಸೂಚಿಸಿದ ಅವರು, ಸ್ಥಳಕ್ಕೆ ಭೇಟಿನೀಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರೈಲ್ವೆ ಮಹಾಪ್ರಬಂಧಕ ಮುಕುಲ್ ಸರನ್ ಮಾಥರ್ ಅವರಿಗೆ ತಿಳಿಸಿದರು.
ಪ್ರಧಾನ ಮಂತ್ರಿ ಅಮೃತ ಸ್ಟೇಶನ್ ಯೋಜನೆಯಡಿ ಅಭಿವೃದ್ಧಿಗೆ ಬೆಳಗಾವಿ ನಿಲ್ದಾಣ ಆಯ್ಕೆಯಾಗಿದೆ. ಆದರೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಂದ ದೂರುಗಳು ಬಂದಿವೆ. ಲಿಫ್ಟ್, ಎಲಿವೇಟರ್, ಫುಟ್ ಓವರ್ ಬ್ರಿಡ್ಜ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಘಟಪ್ರಭಾ ನಿಲ್ದಾಣದಲ್ಲಿಯೂ ಫುಟ್ ಓವರ್ ಬ್ರಿಡ್ಜ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸಂಸದರು ಸೂಚಿಸಿದರು.
ಬೆಳಗಾವಿ – ಮಣಗೂರ, ಬೆಳಗಾವಿ – ಮಡಗಾಂವ್ -ಉಡುಪಿ – ಮಂಗಳೂರು, ಬೆಳಗಾವಿ- ಚೆನೈ (ತಿರುಪತಿ ಮಾರ್ಗವಾಗಿ) ನೂತನ ರೈಲು ಪ್ರಾರಂಭಕ್ಕೆ, ಬೆಳಗಾವಿ ಬೆಂಗಳೂರು ವಂದೇ ಭಾರತ ರೈಲು ಸಂಚಾರವನ್ನು ಬೆಳಗಾವಿಯಿಂದ ಬೆಳಿಗ್ಗೆ 6 ಗಂಟೆಗೆ ಆರಂಭವಾಗುವಂತೆ ಹಾಗೂ ಹುಬ್ಬಳ್ಳಿ – ಬೆಳಗಾವಿ – ಪುಣೆ ನಡುವಿನ ವಂದೇ ಭಾರತ ರೈಲು ವಾರದ ಎಲ್ಲ ದಿನ ಸಂಚರಿಸುವಂತೆ ನೋಡಿಕೊಳ್ಳುವಂತೆಯೂ ಸೂಚಿಸಿದರು.
ಪ್ರಮೋದ ಜೋಶಿ, ಚಿದಾನಂದ ಧೀಮಶೆಟ್ಟಿ, ಗುರುಪಾದ ಕಳ್ಳಿ, ಈರಣ್ಣ ಚಂದರಗಿ ಇದ್ದರು.


