ಬೆಳಗಾವಿ: ಬೆಳಗಾವಿಯ ಹೊರವಲಯದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಮೃಗಾಲಯದಲ್ಲಿ 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಇಂದು ಒಂದೇ ದಿನ 20 ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪಿವೆ. ಮೃಗಾಲಯದ ವೈದ್ಯರು ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಭೂತರಾಮನಹಟ್ಟಿಯಲ್ಲಿರುವ
ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ ಎರಡು ದಿನಗಳೊಳಗೆ 28 ಜಿಂಕೆಗಳು ಅಸಹಜವಾಗಿ ಮೃತಪಟ್ಟಿರುವ ಘಟನೆ ಮೃಗಾಲಯ ಆಡಳಿತ ಸೇರಿದಂತೆ ಅರಣ್ಯ ಇಲಾಖೆಯಲ್ಲೂ ಆತಂಕ ಸೃಷ್ಟಿಸಿದೆ. ಈ ಘಟನೆಗೆ ತೀವ್ರ ವ್ಯಾಕುಲ ವ್ಯಕ್ತಪಡಿಸಿರುವ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ವಿಶೇಷ ತನಿಖೆಗೆ ಆದೇಶ ನೀಡಿದ್ದಾರೆ.
ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣ ಇನ್ನೂ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಜಿಂಕೆಗಳು ಸಾಂಕ್ರಾಮಿಕ
ರೋಗದಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು. ಸೋಂಕು ನೀರಿನ ಮೂಲಕವೋ, ಅಥವಾ ಆಹಾರದ ಮೂಲಕವೋ, ಅಥವಾ ಮೃಗಾಲಯದ ಸುತ್ತಮುತ್ತಲೆ ಇರುವ ಬೆಕ್ಕುಮರಿಗಳು/ಇತರೆ ಸಾಕುಪ್ರಾಣಿಗಳ ಮೂಲಕವೋ ಹರಡಿದಿರುವುದನ್ನು ಶಂಕಿಸಲಾಗಿದೆ. ಮೃಗಾಲಯದಲ್ಲಿ ಇನ್ನೂ ಇರುವ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕಠಿಣ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಸಚಿವ ಖಂಡ್ರೆ ಅವರು ತಕ್ಷಣವೇ ಪಶುವೈದ್ಯರು, ಅರಣ್ಯ ತಜ್ಞರು ಹಾಗೂ ವನ್ಯಜೀವಿ ಆರೋಗ್ಯ ವಿಭಾಗದ ಅಧಿಕಾರಿಗಳು ಇವರನ್ನೊಳಗೊಂಡ ವಿಶೇಷ ಸಮಿತಿ ರಚಿಸಲು ಸೂಚನೆ ನೀಡಿದ್ದಾರೆ.
ಈ ಸಮಿತಿ, ಜಿಂಕೆಗಳ ಸಾವಿನ ಕಾರಣ, ಮೃಗಾಲಯದ ನೀರಿನ ಗುಣಮಟ್ಟ, ಆಹಾರದ ಗುಣಮಟ್ಟ, ಸಿಬ್ಬಂದಿಯ ಅಲಕ್ಷ್ಯ ಉಂಟಾಗಿದೆಯೇ? ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಲಿದೆ.
ಗುರುವಾರ 8 ಕೃಷ್ಣಮೃಗ ಮೃತಪಟ್ಟಿದ್ದವು. ಶನಿವಾರ 20 ಮೃತಪಟ್ಟಿವೆ. 38 ಕೃಷ್ಣಮೃಗ ಇದ್ದವು. 4ರಿಂದ 6 ವರ್ಷ ವಯಸ್ಸಿನ ಪ್ರಾಣಿಗಳು ಯಾವುದೋ ಸೋಂಕಿನಿಂದ ಮೃತಪಟ್ಟಿರುವ ಶಂಕೆ ಇದ್ದು, ತನಿಖೆ ಮಾಡುತ್ತಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ ಬಾಳೆಹೊಸೂರ ಸುದ್ದಿಗಾರರಿಗೆ ತಿಳಿಸಿದರು.


