ಬೆಳಗಾವಿ: ಬೆಳಗಾವಿಯಲ್ಲಿ ಅನಧಿಕೃತ ಕಾಲ್ ಸೆಂಟರ್ ಮೇಲೆ ಮಾಳ ಮಾರುತಿ ಮತ್ತು ಎಪಿಎಂಸಿ ಪೊಲೀಸರು ಜಂಟಿ ದಾಳಿ ನಡೆಸಿ ಒಟ್ಟು 33 ಜನ ವಂಚಕರನ್ನು ಬಂಧಿಸಿದ್ದಾರೆ. ಅಜಮ್ ನಗರ ಕುಮಾರ ಹಾಲ್ ಬಳಿ ದಾಳಿ ನಡೆಸಿರುವ ಪೊಲೀಸರು ಬಂಧಿತರಿಂದ 37 ಮೊಬೈಲ್ ಸೇರಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆ ಈ ಕಾಲ್ ಸೆಂಟರ್ ಬಗ್ಗೆ ಪೊಲೀಸರಿಗೆ ಅಪರಿಚಿತ ಪತ್ರ ಬಂದಿತ್ತು. ಇದರ ಬೆನ್ನು ಹತ್ತಿದ ಪೊಲೀಸರು ನಕಲಿ ಸೈಬರ್ ಮೋಸ ಜಾಲವನ್ನು ಬಯಲುಗಳಿದ್ದಾರೆ. ಈ ಗ್ಯಾಂಗಿನಲ್ಲಿ 33 ಜನರಿದ್ದಾರೆ ಇವರಲ್ಲಿ ಕೆಲವರು ಅಮೆರಿಕದವರಿಗೆ ಕರೆ ಮಾಡಿ ಹಣ ದೋಚುತ್ತಿದ್ದರು. ಇವರೆಲ್ಲ ಅಸ್ಸಾಂ, ನಾಗಾಲ್ಯಾಂಡ್, ರಾಜಸ್ಥಾನ, ಉತ್ತರಾಖಂಡ ಮುಂತಾದ ರಾಜ್ಯಗಳಿಗೆ ಸೇರಿದವರು. ಇವರೆಲ್ಲ ಶಿಕ್ಷಣ ಪಡೆದವರಾಗಿದ್ದಾರೆ. ಶೇರು ಟ್ರೇಡಿಂಗ್ ಹೂಡಿಕೆ, ಹೊಸ ಮೊಬೈಲ್ ಖರೀದಿ ಮುಂತಾದ ವಿಷಯಗಳ ಬಗ್ಗೆ ವಿವರಿಸಿ ಹಣ ದೋಚುತ್ತಿದ್ದರು. ದಾಳಿ ಸಂದರ್ಭದಲ್ಲಿ ಪತ್ತೆಯಾದ ಮೊಬೈಲ್ ಮತ್ತು ಲ್ಯಾಪ್ಟಾಪ್ ಪರಿಶೀಲನೆ ಮಾಡುತ್ತಿರುವ ಪೊಲೀಸರು ಇವರಿಂದ ಅಸಂಖ್ಯಾತ ಮೊಬೈಲ್ ಗಳಿಗೆ ಕರೆ ಹೋಗಿರುವುದು ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮಾಹಿತಿ ನೀಡಿದ್ದಾರೆ.


