ಉಗರಗೋಳ: ಯಲ್ಲಮ್ಮನಗುಡ್ಡದಲ್ಲಿ ಸ್ವಚ್ಛತೆ ಕಾಪಾಡುವುದು, ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಸಹಕರಿಸುವುದು ಎಲ್ಲರ ಕರ್ತವ್ಯ. ಹಾಗಾಗಿ ಗುಡ್ಡದಲ್ಲಿನ ವ್ಯಾಪಾರಿಗಳು ಪ್ಲಾಸ್ಟಿಕ್ ಮುಕ್ತವಾಗಿ ವ್ಯವಹಾರ ಮಾಡುವುದಾಗಿ ಸಂಕಲ್ಪ ತೊಡಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ಮುಕ್ತ ದೇವಸ್ಥಾನ ಅಭಿಯಾನದಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣವಾದರೆ ಮಾತ್ರ ಪರಿಸರ ಉಳಿಯಲು ಸಾಧ್ಯ. ಈ ಅಭಿಯಾನಕ್ಕೆ ಎಲ್ಲ ವ್ಯಾಪಾರಿಗಳು ಕೈಜೋಡಿಸಬೇಕು ಎಂದು ಕರೆಕೊಟ್ಟರು. ಇದಕ್ಕೆ ವ್ಯಾಪಾರಿಗಳು ಸಮ್ಮತಿ ಸೂಚಿಸಿದರು.
ನಂತರ ಮಾತು ಮುಂದುವರಿಸಿದ ವೈದ್ಯ,
ಗುಡ್ಡದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಭಕ್ತರೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ, ಪ್ಲಾಸ್ಟಿಕ್ ಮುಕ್ತ ಯಲ್ಲಮ್ಮನಗುಡ್ಡ ನಿರ್ಮಾಣಕ್ಕಾಗಿ ಈ ಅಭಿಯಾನ ನಡೆಸುತ್ತಿದ್ದೇವೆ. ಗುಡ್ಡದಲ್ಲಿನ ಪ್ರತಿ ಅಂಗಡಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ಯಲ್ಲಮ್ಮನಗುಡ್ಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ನಾಗರತ್ನ ಚೋಳಿನ, ಅಲ್ಲಮಪ್ರಭು ಪ್ರಭುನವರ, ರಾಜು ಬೆಳವಡಿ, ಪ್ರಕಾಶ ಲಮಾಣಿ, ಕಲೀಮ್ ಚೂರಿಖಾನ್, ರಾಮಾಚಾರಿ ಲಮಾಣಿ, ವಿನಾಯಕ ಕುಂಕುಮಗಾರ, ಪುಂಡಲಿಕ ಲಮಾಣಿ, ಶಿವು ಜಾವೂರ, ಶಿವು ರಾಠೋಡ, ಪ್ರವೀಣ ರಾಮಾಪುರ, ಎಎಸ್ಐ ಸಣ್ಣಮಾಳಗಿ, ದೇವಸ್ಥಾನ ಸಿಬ್ಬಂದಿ ಹಾಗೂ ಎಲ್ಲ ವ್ಯಾಪಾರಿಗಳು ಹಾಜರಿದ್ದರು.
ಕಾರ್ಯಕ್ರಮ ಮುಗಿದ ನಂತರ ಗುಡ್ಡದಲ್ಲಿನ ಅಂಗಡಿಗಳ ಬಳಿ ತೆರಳಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಯಿತು.


