ಗಂಗಾವತಿ:ಕೋತಿಯೊಂದು ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿ ಬಿಂದಾಸ್ ಆಗಿ ಓಡಾಡುವ ಮೂಲಕ ವಕೀಲರು, ಕಕ್ಷಿದಾರರು, ಸಿಬ್ಬಂದಿ ಹಾಗೂ ಜನರ ಗಮನ ಸೆಳೆಯಿತು.
ಅಪರೂಪದ ಅತಿಥಿಯಾಗಿ ಆಗಮಿಸಿದ್ದ ಕೋತಿಗೆ ಯಾವೊಬ್ಬ ವಕೀಲರು ಓಡಿಸುವ ಯತ್ನ ಮಾಡಲಿಲ್ಲ. ಬದಲಿಗೆ ಅದು ಏನು ಮಾಡಲಿದೆ ನೋಡೋಣ ಎಂಬ ಕುತೂಹಲಕ್ಕಾಗಿ ಅದನ್ನು ಮುಕ್ತವಾಗಿ ಓಡಾಡಲು ಬಿಟ್ಟರು. ಆ ಕೋತಿಗೂ ಇದೇ ಬೇಕಿತ್ತೆನೋ!. ಹಾಗಾಗಿ ವಕೀಲರು ತಮ್ಮ ದಾಖಲೆಗಳನ್ನು ಇಟ್ಟು ಕೂರುವ ಟೇಬಲ್ ಮೇಲೆ ಓಡಾಡಿದ ಹನುಮಂತರಾಯ, ಬಳಿಕ ನ್ಯಾಯಾಧೀಶರಿಗೆ ಅಭಿಮುಖವಾಗಿ ಕುಳಿತು ಏನೋ ವಾದ ಮಾಡುವ, ಅಥವಾ ಮೊರೆ ಸಲ್ಲಿಸುವ ಭಂಗಿಯಲ್ಲಿ ಇದ್ದು ಜನರ ಗಮನ ಸೆಳೆಯಿತು.
ಬಳಿಕ ನ್ಯಾಯಾಲಯದ ನೆಲಹಾಸು ಮೇಲೆ ಕೆಲಕಾಲ ಕುಳಿತು ಸುತ್ತಲಿನ ಜನರನ್ನು ನೋಡಿತು. ಕ್ಷಕದಾರ ಹಾಗೂ ಅಪಾಧಿತರನ್ನು ನಿಲ್ಲಿಸುವ ಬಾಕ್ಸ್ ಮೇಲೆ ಕೆಲ ಕಾಲ ಕುಳಿತು ಬಳಿಕ ಅಲ್ಲಿಂದ ತೆರಳಿತು. ಇದು ಜನರಲ್ಲಿ ಕೆಲಕಾಲ ಮನೋರಂಜನೆ ನೀಡಿತ್ತು.
ಆದರೆ, ಕಳೆದ ಕೆಲ ದಿನಗಳಿಂದ ಕೋರ್ಟ್ ಸುತ್ತಲೂ ಕೋತಿಗಳ ಹಾವಳಿ ಹೆಚ್ಚಾಗಿದೆ. ಕೋತಿಗಳು ಕಚ್ಚುವುದು, ಗಾಯ ಮಾಡುವಂತ ಏನಾದರೂ ಅಪಾಯಕಾರಿ ಸಂಗತಿ ನಡೆಯುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಲ ವಕೀಲರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂತಹದ್ದೇ ಅಪರೂಪ ಹಾಗೂ ಅಚ್ಚರಿ ಘಟನೆಯೊಂದು ಬಾಗಲಕೋಟೆ ಜಿಲ್ಲೆಯೂ ಇತ್ತೀಚೆಗೆ ನಡೆದಿತ್ತು. ಗಾಯವಾಗಿರುವ ಜಾಗವನ್ನು ಸ್ವತಃ ಮಂಗವೇ ವೈದ್ಯರಿಗೆ ವಿವರಿಸಿ, ಚಿಕಿತ್ಸೆ ಪಡೆದು ತೆರಳಿರುವುದು ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಈ ಮೂಲಕ ಮಂಗಗಳು ಮನುಷ್ಯರಷ್ಟೇ ಬುದ್ಧಿಜೀವಿಗಳು ಎನ್ನುವುದಕ್ಕೆ ಬಾಗಲಕೋಟೆಯ ಈ ಘಟನೆಯೊಂದು ಸಾಕ್ಷಿಯಾಗಿತ್ತು.
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಗ, ಬಾಗಲಕೋಟೆ ಜಿಲ್ಲೆ ಇಲಕಲ್ ತಾಲೂಕಿನ ಗುಡೂರ ಗ್ರಾಮದ ಪಶು ಆಸ್ಪತ್ರೆಗೆ ಚಿಕಿತ್ಸೆಗಾಗಿ ತಾನೇ ನೇರವಾಗಿ ಬಂದಿದ್ದಲ್ಲದೇ ಚಿಕಿತ್ಸೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿತ್ತು. ಪಶವೈದ್ಯರ ಬೈಕ್ ಮೇಲೇರಿದ ಮಂಗ, ಗಾಯವಾಗಿದ್ದ ಸ್ಥಳ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಸಾಕಷ್ಟು ಮೂಕಪ್ರಾಣಿ ಜಾನುವಾರುಗಳಿಗೆ ನಾನು ಚಿಕಿತ್ಸೆ ನೀಡಿರುವೆ. ಆದರೆ, ಈಗ ಆಂಜನೇಯ ಸ್ವರೂಪಿಯಾದ ಮಂಗ, ತಾನೇ ಸ್ವತಃ ಬಂದು ನನ್ನಿಂದ ಚಿಕಿತ್ಸೆ ಪಡೆದಿದೆ. ಹಾಗಾಗಿ ನಾನೂ ಪುಣ್ಯವಂತ ಅಂತ ಭಾವಿಸಿದ್ದೇನೆ ಎಂದು ವೈದ್ಯ ಜಿ.ಜಿ.ಬಿಲ್ಲೊರ ಹರ್ಷ ವ್ಯಕ್ತಪಡಿಸಿದ್ದರು.


