ಬೆಂಗಳೂರು: ಮಂಗಳವಾರ ಸಂಜೆ 7ಕ್ಕೆ ಎರಡನೇ ಹಂತದ ಮತದಾನ ಅಂತ್ಯಗೊಳ್ಳುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆ ಅಂತ್ಯವಾಗಿದ್ದು ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ.
ಇದಕ್ಕೂ ಮುನ್ನ ಹಲವು ಸಂಸ್ಥೆಗಳು ಬಿಹಾರ ವಿಧಾನಸಭೆ ಚುನಾವಣೆಗೆ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದ್ದು ಹಲವು ಸಮೀಕ್ಷೆಗಳು ಎನ್ಡಿಎಗೆ ಬಹುಮತ ಸಿಗಲಿವೆ ಎಂದು ಅಂದಾಜಿಸಿವೆ.
ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್ ಅವರ ಎಲ್ಜೆಪಿ ಒಂದಾಗಿ ಸ್ಪರ್ಧೆ ಮಾಡಿದ್ದವು. ಮತ್ತೊಂದೆಡೆ ಮಹಾಘಟಬಂಧನ್ನಲ್ಲಿ ಕಾಂಗ್ರೆಸ್ ಮತ್ತು ತೇಜಸ್ವಿ ಯಾದವ್ ಅವರ ಆರ್ಜೆಡಿ ಒಂದಾಗಿದ್ದವು. ಮತ್ತೊಂದೆಡೆ ಚುನಾವಣಾ ಚಾಣಕ್ಯ ಖ್ಯಾತಿಯ ಪ್ರಶಾಂತ್ ಕಿಶೋರ್ ಅವರ ಜನ್ ಸೂರಾಜ್ ಪಕ್ಷವು ಮೊದಲ ಬಾರಿಗೆ ಸ್ಪರ್ಧೆ ಮಾಡಿತ್ತು.
ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದೆ. ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ-ಜೆಡಿಯು-ಎಲ್ಜೆಪಿಯ ಎನ್ಡಿಎ ಮೈತ್ರಿಕೂಟ ಸಂಪೂರ್ಣ ಬಹುಮತ ಪಡೆಯುತ್ತಿದೆ. ಮಹಾಘಟಬಂಧನ್ ಕೂಟವು ಎರಡನೇ ಸ್ಥಾನ ಪಡೆಯಬಹುದು ಎನ್ನುತ್ತಿದೆ ವರದಿ.
ಸಮೀಕ್ಷೆಗಳ ಪ್ರಕಾರ, ಪ್ರಶಾಂತ್ ಕಿಶೋರ್ ಅವರ ಜನ್ ಸೂರಾಜ್ ಪಕ್ಷವು (ಜೆಎಸ್ಪಿ) ನಿರೀಕ್ಷಿತ ಮಟ್ಟದ ಜನಬೆಂಬಲ ಪಡೆಯುವಲ್ಲಿ ವಿಫಲವಾಗಿದೆ.
ದೈನಿಕ್ ಭಾಸ್ಕರ್ ಸಮೀಕ್ಷೆ ಪ್ರಕಾರ ಎನ್ಡಿಎ 145ರಿಂದ 160 ಸೀಟು ಪಡೆಯಬಹುದು. ಮಹಾಘಟಬಂಧನ್ 73ರಿಂದ 91, ಜೆಎಸ್ಪಿ 0-3 ಮತ್ತು ಇತರರು 5ರಿಂದ 7 ಸ್ಥಾನ ಪಡೆಯಬಹುದು.
ಜೆವಿಸಿ ಸಮೀಕ್ಷೆ ಪ್ರಕಾರ ಎನ್ಡಿಎ 135ರಿಂದ 150 ಸೀಟು ಪಡೆಯಬಹುದು. ಮಹಾಘಟಬಂಧನ್ 88ರಿಂದ 103, ಜೆಎಸ್ಪಿ 0-1 ಮತ್ತು ಇತರರು 3ರಿಂದ 6 ಸ್ಥಾನ ಪಡೆಯಬಹುದು.
ಚಾಣಕ್ಯ ಸ್ಟ್ರಾಟಜೀಸ್, ದೈನಿಕ್ ಭಾಸ್ಕರ್, ಜೆವಿಸಿ, ಮ್ಯಾಟ್ರಿಜ್, ಪಿ-ಮಾರ್ಕ್ ಮತ್ತು ಪೀಪಲ್ಸ್ ಇನ್ಸೈಟ್ ಸೇರಿದಂತೆ ಎಲ್ಲಾ ಸಮೀಕ್ಷಕರು ಪ್ರಶಾಂತ ಕಿಶೋರ ಅವರ ಪಕ್ಷವು ಎರಡಂಕಿಯ ಗಡಿಯನ್ನು ದಾಟುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ, ಎನ್ಡಿಎ 135 ರಿಂದ 150 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಪೀಪಲ್ಸ್ ಪಲ್ಸ್ ಮತ್ತು ಪೀಪಲ್ಸ್ ಇನ್ಸೈಟ್ ಬಿಹಾರದಲ್ಲಿ ಆಡಳಿತಾರೂಢ ಮೈತ್ರಿಕೂಟವು ಕನಿಷ್ಠ 133 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ.
ಆರ್ಜೆಡಿ ನೇತೃತ್ವದ ಮಹಾಘಟಬಂಧನವು (Mahagathbandhan) ಎರಡನೇ ಸ್ಥಾನದಲ್ಲಿದೆ. ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ‘ಇಂಡಿಯಾ’ ಮೈತ್ರಿಕೂಟಕ್ಕೆ 73 ರಿಂದ 91 ಸ್ಥಾನಗಳನ್ನು ನೀಡಿದರೆ ಜೆವಿಸಿ 88 ರಿಂದ 103 ಮತ್ತು ಮ್ಯಾಟ್ರಿಜ್ 70-90 ಸ್ಥಾನಗಳನ್ನು ಊಹಿಸಿದೆ.


