ಸಂಕೇಶ್ವರ : ಅನ್ಯ ಧರ್ಮಗಳನ್ನು ಗೌರವಿಸುವ, ಇತರ ಭಾಷೆಗಳನ್ನು ಪ್ರೀತಿಸುವ ಔದಾರ್ಯವಿರುವ ಕನ್ನಡಿಗರ ಮನೆಯಲ್ಲಿ ಕಿಟಕಿಗಳು ಯಾವುದೆ ಭಾಷೆಯಾದರೂ ಇರಬಹುದು, ಆದರೆ ಹೆಬ್ಬಾಗಿಲು ಮಾತ್ರ ಕನ್ನಡವೇ ಇರಲಿ ಎಂದು ಪ್ರಾಧ್ಯಾಪಕ ಡಾ. ಕುಮಾರ ತಳವಾರ ಹೇಳಿದರು.
ಇಲ್ಲಿನ ಬ್ರಿಲಿಯಂಟ್ ಸಿಬಿಎಸ್ಇ ಶಾಲೆಯಲ್ಲಿ ಜರುಗಿದ 70 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಬಾದಾಮಿಯ ಕಪ್ಪೆ ಅರಭಟ್ಟನ ಶಾಸನವನ್ನು ಉಲ್ಲೇಖಿಸಿ, ಕನ್ನಡಿಗರು ಒಳ್ಳೆಯವರೊಂದಿಗೆ ಒಳ್ಳೆಯವರಾಗಿ, ಮಧುರವಾಗಿ ವ್ಯವಹರಿಸುವವರೊಂದಿಗೆ ಮಧುರವಾಗಿ ವರ್ತಿಸುವ ಗುಣವನ್ನು ಹೊಂದಿದ್ದಾರೆ ಎಂದು ವಿವರಿಸಿದರು.
ಕನ್ನಡದ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯಗೊಳಿಸಲು ಪ್ರೀತಿ ಮತ್ತು ವಿಶ್ವಾಸದಿಂದ ಒತ್ತಾಯಿಸಬೇಕು. ಗಡಿ ಭಾಗದಲ್ಲಿ ಕನ್ನಡದ ಬಗ್ಗೆ ಹೆಚ್ಚು ಗಮನ ಹರಿಸಲು ಹಾಗೂ ಭಾಷಾ ಪ್ರೇಮವನ್ನು ಕ್ರಿಯಾತ್ಮಕವಾಗಿ ತೋರಿಸಲು ಎಲ್ಲರೂ ಮುಂದಾಗಬೇಕೆಂದು ಎಂದರು.
ಮನೆಯ ಭಾಷೆ ಯಾವುದೇ ಇರಲಿ, ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಜನರೂ ಕನ್ನಡಿಗರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಕಿಯರಾದ ಧನಶ್ರೀ ಕೇಸ್ತಿ, ಶ್ವೇತಾ ನಾಯಿಕ ಮತ್ತು ವಿದ್ಯಾರ್ಥಿನಿಯರಾದ ಸಾಕ್ಷತಾ ಮಠದ, ಸಾದಿಯಾ ಮಗದುಮ್ ಮಾತನಾಡಿದರು.
ಆಡಳಿತಾಧಿಕಾರಿ ವಿನಯ ಹಾಲದೇವರಮಠ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಸಂದೀಪ ಮಹಾಳಂಕ, ರಾಜು ಗಡಕರಿ, ಪ್ರಾಚಾರ್ಯೆ ನಸೀಮಾ ಢಾಂಗೆ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಧ್ವಜಾರೋಹಣ ನೆರವೇರಿಸಲಾಯಿತು. ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು.
ಪೃಥ್ವಿರಾಜ ಬಸ್ತವಾಡಿ ಸ್ವಾಗತಿಸಿದರು. ರಷಿಕಾ ಹುದ್ದಾರ ನಿರೂಪಿಸಿದರು. ಶಿಕ್ಷಕಿ ಉಮಾ ಆಲೂರಿ ಪರಿಚಯಿಸಿದರು. ಶಿಕ್ಷಕಿ ದೀಪಾ ಕೇದಾರಶೆಟ್ಟಿ ವಂದಿಸಿದರು.


