ಸೂರತ್: ಮೇಘಾಲಯದ ಆಟಗಾರ ಆಕಾಶಕುಮಾರ ಚೌಧರಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸೂರತ್ನಲ್ಲಿ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಆಡುತ್ತಿದ್ದ 25 ವರ್ಷದ ಚೌಧರಿ, ಸತತ 8 ಸಿಕ್ಸರ್ಗಳನ್ನು ಸಿಡಿಸುವುದರ ಜೊತೆಗೆ, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವೇಗದ ಅರ್ಧಶತಕ ದಾಖಲಿಸಿದ್ದಾರೆ.
ಸತತ 8 ಸಿಕ್ಸರ್ಗಳನ್ನು ಬಾರಿಸಿದ ವಿಶ್ವದ ಮೊದಲ ಪ್ರಥಮ ದರ್ಜೆ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಚೌಧರಿ ಪಾತ್ರರಾದರು. ಈ ಹಿಂದೆ, ಲೆಸ್ಟರ್ಶೈರ್ನ ವೇನ್ ವೈಟ್ 2012 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು, ಇದು ಪ್ರಥಮ ದರ್ಜೆ ಕ್ರಿಕೆಟ್ನ ವೇಗದ ಅರ್ಧಶತಕವಾಗಿತ್ತು. ಈಗ ಆಕಾಶ ಚೌಧರಿ ಆ ದಾಖಲೆಯನ್ನು ಮುರಿದಿದ್ದಾರೆ.
ಎಂಟನೇ ಕ್ರಮಾಂಕದಲ್ಲಿ ಸಿಡಿಲಬ್ಬರ
ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಚೌಧರಿ, ತಮ್ಮ ಇನ್ನಿಂಗ್ಸ್ನ ಮೊದಲ ಎಂಟು ಎಸೆತಗಳಲ್ಲಿ ಸತತವಾಗಿ ಸಿಕ್ಸರ್ಗಳನ್ನು ಬಾರಿಸಿ ಅಚ್ಚರಿ ಮೂಡಿಸಿದರು.
ಕೇವಲ 14 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದ ಚೌಧರಿ, ಮೇಘಾಲಯ ತಂಡವು 6 ವಿಕೆಟ್ಗೆ 628 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಲು ಸಹಾಯ ಮಾಡಿದರು.
ಲಿಮರ್ ದಾಬಿಯ ಓವರ್ನಲ್ಲಿ 6 ಸಿಕ್ಸರ್
ತಂಡವು 576 ರನ್ಗಳ ಬೃಹತ್ ಮೊತ್ತದತ್ತ ಸಾಗುತ್ತಿರುವಾಗ ಚೌಧರಿ ಈ ಸಾಧನೆ ಮಾಡಿದರು. ಬಲಗೈ ಬ್ಯಾಟರ್ ಆಗಿರುವ ಅವರು, ಇನ್ನಿಂಗ್ಸ್ಗೆ ಎರಡು ಸಿಂಗಲ್ಸ್ ಮತ್ತು ಒಂದು ಡಾಟ್ ಬಾಲ್ನೊಂದಿಗೆ ಆರಂಭ ಮಾಡಿದ್ದರು. ನಂತರ, 126ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಲಿಮರ್ ದಾಬಿ ಅವರ ಪ್ರತಿ ಎಸೆತವನ್ನೂ (ಒಟ್ಟು ಆರು ಎಸೆತ) ಸಿಕ್ಸರ್ಗೆ ಅಟ್ಟಿದರು. ನಂತರದ ಓವರ್ನ ಮೊದಲ ಎರಡು ಎಸೆತಗಳನ್ನೂ ಬೌಂಡರಿ ದಾಟಿಸಿ ಸತತ 8 ಸಿಕ್ಸರ್ಗಳನ್ನು ಸಿಡಿಸಿದ ಮೈಲಿಗಲ್ಲನ್ನು ತಲುಪಿದರು.


