ಬೆಳಗಾವಿ: 28 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿಯಲ್ಲಿ ಇದೀಗ ಕಬ್ಬು ಬೆಳೆಗಾರರು ರಸ್ತೆಗಳಿದಿದ್ದಾರೆ. ಕಳೆದ ಕೆಲ ದಿನಗಳಿಂದ ಕಬ್ಬು ಬೆಳೆಗಾರರು ಹಾಗೂ ಹೋರಾಟಗಾರರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಕಬ್ಬಿಗೆ ನ್ಯಾಯವಾದ ದರ ನೀಡುವವರೆಗೆ ಹೋರಾಟ ನಡೆಸಲಾಗುವುದು. ಬೇಡಿಕೆ ಈಡೇರಿಸದಿದ್ದರೇ ನ. 7 ರಿಂದ ರಾಜ್ಯಾದ್ಯಂತ 4 ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ಗೆ ನಿರ್ಧರಿಸಲಾಗಿದೆ. ಈ ನಡುವೆ ಶುಕ್ರವಾರ ಬೆಳಗಾವಿ ಬಂದ್ ಗೆ ಕರೆ ನೀಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಅಥಣಿ, ಗೋಕಾಕ, ಚಿಕ್ಕೋಡಿ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಸಾವಿರಾರು ಜನ ಬೆಂಬಲ ಸಾಥ್ ನೀಡುತ್ತಿದ್ದು, ಬಿಜೆಪಿ ಬೆಂಬಲ ಸೂಚಿಸಿದೆ. ಬೆಳಗಾವಿ ಜೊತೆಗೆ ಬಾಗಲಕೋಟೆ, ವಿಜಯಪುರ ಸೇರಿ ಹಲವೆಡೆ ರೈತರು ಬೀದಿಗೆ ಇಳಿದಿದ್ದಾರೆ. ಈಗಾಗಲೇ ಸರ್ಕಾರಕ್ಕೆ ನೀಡಿದ ಡೆಡ್ ಲೈನ್ ಮುಗಿದಿದೆ. ಪಂಜಾಬ್ ಮಾದರಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ಗೆ ಕರೆ ನೀಡಿದ್ದಾರೆ.
ಕಬ್ಬು ಬೆಳೆಗಾರರ ಈ ಹೋರಾಟಕ್ಕೆ ಅನೇಕ ಕಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ. ಅನೇಕ ಕಡೆ ಸ್ವತಃ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಹಸಿರು ಸೇನೆ, ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಕಬ್ಬಿಗೆ ನ್ಯಾಯವಾದ ದರ ನೀಡುವವರೆಗೆ ಹೋರಾಟ ನಡೆಸಲಾಗುವುದು.
ಬೇಡಿಕೆ ಈಡೇರಿಸದಿದ್ದರೇ, ನವೆಂಬರ್ 7ರಿಂದ ರಾಜ್ಯಾದ್ಯಂತ 4 ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ಗೆ ನಿರ್ಧರಿಸಲಾಗಿದೆ. ಬೆಂಗಳೂರಿಂದ ಬೆಳಗಾವಿವರೆಗೂ ಹೆದ್ದಾರಿ ಬಂದ್ ಮಾಡುವ ಬೃಹತ್ ಪ್ರತಿಭಟನೆ ಆಗಲಿದೆ. ಜೊತೆಗೆ ಮಂಡ್ಯ, ಮೈಸೂರು, ಶಿವಮೊಗ್ಗ, ಹಾವೇರಿ, ಧಾರವಾಡ ಸೇರಿ ಹಲವು ಜಿಲ್ಲೆಗಳಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆ ಇದೀಗ ದಿನೇ ದಿನೇ ಬೆಳಗಾವಿ ಸೇರಿದಂತೆ ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಹೋರಾಟ ಚುರುಕು ಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ.


