ಬೆಂಗಳೂರು: ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ಕೆಲಸ ಮಾಡುವ 41 ವರ್ಷದ ನಟಿಯೊಬ್ಬರು ತಮಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪದೇ ಪದೇ ಅಶ್ಲೀಲ ಸಂದೇಶಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ಕಿರುಕುಳ ಮುಂದುವರೆಸಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ತೆಲುಗು ಮತ್ತು ಕನ್ನಡ ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುವ ನಟಿಗೆ ಮೂರು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ‘ನವೀಂಜ್’ ಎಂಬ ಬಳಕೆದಾರರಿಂದ ಫ್ರೆಂಡ್ ರಿಕ್ವೆಸ್ಟ್ ಬಂದ ನಂತರ ಈ ಭಯಾನಕ ಅನುಭವ ಪ್ರಾರಂಭವಾಯಿತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಫೇಸ್ಬುಕ್ನಲ್ಲಿ ‘Naveenz’ ಎಂಬ ಬಳಕೆದಾರರಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ನಟಿ ಅದನ್ನು ಸ್ವೀಕರಿಸದಿದ್ದರೂ, ಆ ವ್ಯಕ್ತಿ ಮೆಸೆಂಜರ್ ಮೂಲಕ ಪ್ರತಿದಿನವೂ ಅಸಭ್ಯ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದ.
ನಟಿ ಆ ಬಳಕೆದಾರನನ್ನು ಬ್ಲಾಕ್ ಮಾಡಿದ ನಂತರವೂ, ಆತ ಹಲವು ಹೊಸ ಖಾತೆಗಳನ್ನು ಸೃಷ್ಟಿಸಿಕೊಂಡು ಅಶ್ಲೀಲ ಮೆಸೇಜ್ ಕಳುಹಿಸುವುದನ್ನು ಮುಂದುವರಿಸಿದ್ದ. ಈತ ಬೇರೆ ಬೇರೆ ಐಡಿಗಳಿಂದ ಅಶ್ಲೀಲ ಸಂದೇಶಗಳು ಮತ್ತು ತನ್ನ ಖಾಸಗಿ ಅಂಗಗಳ ವೀಡಿಯೊಗಳನ್ನು ಕೂಡ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ನವೆಂಬರ್ 1 ರಂದು, ನಟಿ ನಾಗರಭಾವಿಯ ನಂದನ್ ಪ್ಯಾಲೇಸ್ ಬಳಿ ಬೆಳಿಗ್ಗೆ 11:30 ರ ಸುಮಾರಿಗೆ ಆರೋಪಿಯನ್ನು ನೇರವಾಗಿ ಭೇಟಿಯಾಗಿ, ಈ ತರಹದ ವರ್ತನೆ ನಿಲ್ಲಿಸುವಂತೆ ಎಚ್ಚರಿಸಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಶೀಘ್ರದಲ್ಲೇ ಕಿರುಕುಳ ಮತ್ತೆ ಆರಂಭವಾಯಿತು ಎಂದು ಆರೋಪಿಸಲಾಗಿದೆ. ನಂತರ ನಟಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

            
        
        
        
 
        