ಬೆಳಗಾವಿ ಸುವರ್ಣಸೌಧ : 2023ರ ಜನವರಿ 14ರ ಮಕರ ಸಂಕ್ರಾಂತಿಯಿಂದ,
ವಿದ್ಯುತ್ ಚಾಲಿತ ಮಗ್ಗದ ಕೆಲಸಗಾರರಿಗೂ ಸಹ ನೇಕಾರ ಸಮ್ಮಾನ ಯೋಜನೆಯಡಿ ವಾರ್ಷಿಕ 5000 ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನೇಕಾರ ಸೇರಿದಂತೆ ಇನ್ನಿತರ ಸಮುದಾಯದ ಮುಖಂಡರು ಡಿಸೆಂಬರ್ 19ರಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ವಿದ್ಯಾನಿಧಿ ಯೋಜನೆಯ ವ್ಯಾಪ್ತಿಗೆ ನೇಕಾರ ಮಕ್ಕಳನ್ನು ಸಹ ತರಲಾಗಿದೆ.
ಜನವರಿ ಮೊದಲ ವಾರದಲ್ಲಿ ವಿದ್ಯಾನಿಧಿ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ತಿಳಿಸಿದರು.
ಸಾಂಪ್ರದಾಯಿಕ ಉದ್ಯೋಗಗಳಿಗೆ ಪ್ರೋತ್ಸಾಹಿಸುವುದು
ದೇಶದ ಆರ್ಥಿಕತೆಯ ಹಿತದೃಷ್ಡಿಯಿಂದ ಅನುಕೂಲಕರ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ನೇಕಾರರು ಸಹ ಶ್ರಮಜೀವಿಗಳಾಗಿದ್ದಾರೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಎಂಬುದನ್ನು ರೈತರ ಹಾಗೇ ನೇಕಾರರು ಕಾರ್ಯಗತ ಮಾಡುತ್ತಾರೆ. ಇಂತಹ ದುಡಿಯುವ ವರ್ಗದ ಹಿತಕಾಯಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ಬೇಡಿಕೆಯಂತೆ ನೇಕಾರರಿಗೆ 2 ಲಕ್ಷ ರೂ.ಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ನೇಕಾರರಿಗೆ ತಮಿಳುನಾಡಿನ ಮಾದರಿಯಲ್ಲಿ ಉಚಿತ ವಿದ್ಯುತ್ ಕೊಡಲು ಯೋಜಿಸಲಾಗಿದೆ. ಯುನಿಟ್ ವೊಂದಕ್ಕೆ ಈಗ 2 ರೂ. ಇರುವುದನ್ನು ಇದೀಗ 40 ಪೈಸೆಗೆ ಇಳಿಸಿದ್ದೇವೆ ಎಂದು ತಿಳಿಸಿದರು.
ವೃತ್ತಿಪರ ನೇಕಾರ ಕೆಲಸಗಾರರಿಗೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತದೆ ಎಂದರು.
ನೇಕಾರಿಕೆಯನ್ನು ಗುರುತಿಸಿ ಅನುಕೂಲತೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಹವಾಸಿ ಪ್ರಮಾಣ ಪತ್ರ ಕೊಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಿಸಿ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.
ನೇಕಾರರಿಗೆ ಅನುಕೂಲತೆ ಮಾಡಿಕೊಡುವ ನಿಟ್ಟಿನಲ್ಲಿ ಮನೆಯಲ್ಲಿನ ಕೈಮಗ್ಗಗಳನ್ನು
ಗುಡಿ ಕೈಗಾರಿಕೆ ಎಂದು ಪರಿಗಣಿಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣ ಪತ್ರದಿಂದ ವಿನಾಯಿತಿ ಕೊಡಿಸಲಾಗುವುದು ಎಂದು ತಿಳಿಸಿದರು.
ದೊಡ್ಡ ಮಟ್ಟದ ಖಾರ್ಕಾನೆಗಳ ಸ್ಥಾಪನೆಗಿಂತ ಅತೀ ಹೆಚ್ಚು ಜನರಿಗೆ ಉದ್ಯೋಗ ಕೊಡುವ ಕಾರ್ಯದಿಂದಾಗಿ ದೇಶ ಅಭಿವೃದ್ದಿಯಾಗಲಿದೆ ಎಂಬುದು ಗಾಂಧೀಜಿಯವರ ವಿಚಾರಧಾರೆಯಾಗಿದೆ. ತಂತ್ರಜ್ಞಾನ ಬೆಳೆಯದೇ ಇದ್ದ ಕಾಲದಲ್ಲಿ ಮಾನವನ ಗೌರವ ರಕ್ಷಣೆ ಮಾಡಿದವರು ನೇಕಾರರು. ಹೀಗಾಗಿ ನೇಕಾರ ಹಿತರಕ್ಷಣೆಗೆ ಸಹ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದರು.