ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಕಾವೇರುತ್ತಿದ್ದು, ಆಡಳಿತಾರೂಢ ಎನ್ಡಿಎ ಮತ್ತು ಮಹಾಘಟಬಂಧನ ನಡುವಿನ ತೀವ್ರ ಹಣಾಹಣಿಗೆ ಸಾಕ್ಷಿಯಾಗಬಲ್ಲ ಚುನಾವಣೆಯ ಮೊದಲ ಹಂತದ ಮತದಾನ ನವೆಂಬರ್ 6 ಮತ್ತು 2ನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.
ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ನಾನಾ ಕಸರತ್ತಿನಲ್ಲಿ ನಿರತವಾಗಿವೆ. ಈ ಮಧ್ಯೆ ಬೇಗುಸರಾಯ್ನ ಕೊಳವೊಂದಕ್ಕೆ ಹಾರಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮೀನು ಹಿಡಿಯುವ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಸದ್ಯ ಈ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೀನುಗಾರರ ಸಮಸ್ಯೆಗಳನ್ನು ಆಲಿಸಲು ನವೆಂಬರ್ 2ರಂದು ರಾಹುಲ್ ಗಾಂಧಿ ಬೇಗುಸರಾಜ್ಗೆ ತೆರಳಿದರು. ಈ ವೇಳೆ ಮೀನುಗಾರರ ಜತೆ ಬೋಟ್ನಲ್ಲಿ ತೆರಳಿದ್ದ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕೆರೆಗೆ ಜಿಗಿದು ಬಲೆ ಹಾಕಿ ಮೀನು ಹಿಡಿದರು.
ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಭಾಗವಾಗಿರುವ, ವಿಕಾಸಶೀಲ ಇನ್ಸಾನ್ ಪಾರ್ಟಿ (VIP)ಯ ಮುಖಂಡ, ಮಾಜಿ ಸಚಿವ ಮುಕೇಶ ಸಾಹ್ನಿ ಅವರ ಜೊತೆ ಬೇಗುಸರಾಯ್ನಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಿದರು. ಈ ವೇಳೆ ಮೀನುಗಾರರೊಂದಿಗೆ ಸಂವಾದ ನಡೆಸಿದ ಅವರು ದೋಣಿಯಲ್ಲಿ ಕೆರೆಗೆ ತೆರಳಿದರು. ಬಳಿಕ ಇದ್ದಕ್ಕಿದ್ದಂತೆ ನೀರಿಗೆ ಜಿಗಿದರು. ಅವರ ಜತೆ ಮುಕೇಶ ಸಾಹ್ನಿ ಕೂಡ ನೀರಿಗೆ ಇಳಿದರು. ಕಾಂಗ್ರೆಸ್ ನಾಯಕ ಕನ್ಹಯ ಕುಮಾರ ಕೂಡ ಇದ್ದರು.
ಬಲೆ ಬೀಸಿ ಮೀನು ಹಿಡಿದ ರಾಹುಲ್ ಗಾಂಧಿಯನ್ನು ನೋಡಿ ಮೀನುಗಾರರು ರೋಮಾಂಚನಗೊಂಡರು.
ರಾಹುಲ್ ಗಾಂಧಿ ದೋಣಿಯಿಂದ ನೀರಿಗೆ ಜಿಗಿಯುತ್ತಿರುವ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದೆ. ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಈ ದೃಶ್ಯವನ್ನು ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ಬರೆದುಕೊಂಡಿದೆ.
ಮೀನುಗಾರರ ಮತಗಳ ಮೇಲೆ ಕಣ್ಣಿಟ್ಟಿರುವ ಇಂಡಿ ಒಕ್ಕೂಟ ಪ್ರಣಾಳಿಕೆಯಲ್ಲಿ ಅವರಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಜೀವ ವಿಮೆಯ ವಾಗ್ದಾನ ನೀಡಿದೆ. ಮೀನುಗಾರಿಕೆಗೆ ನಿಷೇಧವಿರುವ 3 ತಿಂಗಳು ಪ್ರತಿ ಕುಟುಂಬಕ್ಕೆ 5,000 ರೂ. ಒದಗಿಸುವುದಾಗಿ ಭರವಸೆ ನೀಡಿದೆ. ನವೆಂಬರ್ 14ರಂದು ಬಿಹಾರ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.


