ಬೆಳಗಾವಿ: ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವುದನ್ನು ತಕ್ಷಣ ತಡೆಹಿಡಿಯುವಂತೆ ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ನಾಗರಾಜ ಯಾದವ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿರುವುದು ಅತ್ಯಂತ ಖಂಡನಿಯವಾಗಿದ್ದು ಗಡಿಭಾಗದಲ್ಲಿ ವ್ಯಾಪಕ ಆಕ್ರೋಶ ಅಸಮಾಧಾನ ವ್ಯಕ್ತವಾಗುತ್ತಿದೆ. ಅಲ್ಲದೇ ಕರ್ನಾಟಕ ಸರಕಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ ಅವರ ಪತ್ನಿ ಎಂಬ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆಯೆಂಬ ಭಾವನೆ ಉಂಟಾಗಿದ್ದು ಸರಕಾರಕ್ಕೆ ಕಳಂಕ ತಂದಂತಾಗಿದೆ. ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯು ಕನ್ನಡ ನಾಡು, ನುಡಿ, ಗಡಿಯ ಸಂಬಂಧ ಯಾವಾಗಲೂ ನಕಾರಾತ್ಮಕ ನಿಲುವು ತಳೆಯುತ್ತ ಬಂದಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಧಿಕ್ಕರಿಸುತ್ತಲೇ ಬಂದಿದೆ. ಸಂಸ್ಥೆಯ ಒಂದೂ ನಾಮ ಫಲಕಗಳಲ್ಲಿ ಕನ್ನಡವು ಕಾಣುವುದಿಲ್ಲ. ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿಯನ್ನು 60 ವರ್ಷ ವಯಸ್ಸಿಗಿಂತ ಮೇಲಿನವರಿಗೆ ಕೊಡಬೇಕೆಂಬ ನಿಯಮವನ್ನು ಸಹ ರಾಜಶ್ರೀಯವರ ವಿಷಯದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ರಾಜಶ್ರೀ ಅವರಿಗೆ ನೀಡಲು ಉದ್ದೇಶಿಸಿರುವ ಪ್ರಶಸ್ತಿಯನ್ನು ಸರಕಾರದ ಮಾನ, ಮರ್ಯಾದೆ, ಗೌರವದ ದೃಷ್ಟಿಯಿಂದ ತತಕ್ಷಣ ತಡೆಹಿಡಿಯಬೇಕೆಂದು ಕೋರುತ್ತೇವೆ.
ಬೆಳಗಾವಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದ ಅನೇಕ ಗಣ್ಯ ಮಾನ್ಯರಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಪತ್ರಿಕೋದ್ಯಮ ಹಾಗೂ ಕನ್ನಡ ಹೋರಾಟಗಳಲ್ಲಿ ಅನೇಕ ಮಹನೀಯರಿದ್ದಾರೆ. ಈ ಕೆಳಕಂಡ ಅವರ ಬಗ್ಗೆ ತಾವು ಸಹಾನುಭೂತಿಯಿಂದ ಪರಿಶೀಲಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಬೇಕು.
1)ಶ್ರೀ. ಬಿ.ಎಸ್. ಗವಿಮಠ : 80 ವರ್ಷ, 2) ಶ್ರೀ ಬಸವರಾಜ ಜಗಜಂಪಿ : 78 ವರ್ಷ, 3) ಶ್ರೀ. ಎಲ್ ಎಸ್. ಶಾಸ್ತ್ರಿ : 82 ವರ್ಷ,
ಈ ಮೂವರು ಕ್ರಮವಾಗಿ ಸಾಹಿತ್ಯ, ರಂಗಭೂಮಿ ಹಾಗೂ ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ. ಎಸ್.ಎಂ. ಕುಲಕರ್ಣಿ 83 ವರ್ಷ ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಲಾ ಸೊಸಾಯಿಟಿ ಅಧ್ಯಕ್ಷರಾಗಿ ಬೆಳಗಾವಿಯ ಕನ್ನಡ ಚಟುವಟಿಕೆಗಳಲ್ಲಿ ಸದಾಕಾಲ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದಾರೆ.
ಎಚ್.ಬಿ.ಕೋಲಕಾರ : ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಡಿ.ಎಸ್.ಚೌಗಲೆ : ಅಪ್ಪಟ ರಂಗಕರ್ಮಿಯಾಗಿರುವ ಇವರು ಕರ್ನಾಟಕವಲ್ಲದೇ ಹೊರರಾಜ್ಯಗಳಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದವರಾಗಿದ್ದಾರೆ.
ಮಾನವ ಬಂಧುತ್ವ ವೇದಿಕೆ : ಈ ಸಂಸ್ಥೆಯು ಜನತೆಯಲ್ಲಿ ಪ್ರಗತಿಪರ ವಿಚಾರಧಾರೆಗಳನ್ನು ಬಿತ್ತುತಿದ್ದು ಪ್ರೊ. ವೈ.ಬಿ.ಹಿಮ್ಮಡಿಯವರ
ನೇತೃತ್ವದಲ್ಲಿ ಜನಪರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ.
ಈ ಮೇಲಿನ ಅಂಶಗಳನ್ನು ಪರಿಗಣಿಸಿ ರಾಜಶ್ರೀ ನಾಗರಾಜ ಯಾದವ ಅವರ ಬದಲಿಗೆ ಮೇಲಿನ ಒಬ್ಬರಿಗೆ ಪ್ರಶಸ್ತಿಯನ್ನು ಘೋಷಿಸಬೇಕೆಂದು ಕೋರುತ್ತೇವೆ ಎಂದು ಸಂಘಟನೆಯ ಅಧ್ಯಕ್ಷ ಅಶೋಕ ಚಂದರಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

 
             
         
         
        
 
  
        
 
    