ನವದೆಹಲಿ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾದ ಮೊಹಮ್ಮದ್ ಯೂನಸ್ ಅವರು ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ ಮುಖ್ಯಸ್ಥ ಜನರಲ್ ಸಹೀರ್ ಶಮ್ಶಾದ್ ಮಿರ್ಜಾ ಅವರಿಗೆ ನೀಡಿದ ಉಡುಗೊರೆಯು ಈಗ ವಿವಾದಕ್ಕೆ ಕಾರಣವಾಗಿದೆ. ಉಡುಗೊರೆಯಾಗಿ ನೀಡಲಾದ ‘ಕಾಫಿ ಟೇಬಲ್ ಪುಸ್ತಕ’ದಲ್ಲಿ, ಭಾರತದ ಕೆಲವು ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆ ಇದೆ ಎಂದು ನೆಟಿಜನ್ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಆರ್ಟ್ ಆಫ್ ಟ್ರಯಂಫ್, ಗ್ರಾಫಿಟಿ ಆಫ್ ಬಾಂಗ್ಲಾದೇಶದ ನ್ಯೂ ಡಾನ್’ (Art of Triumph, Graffiti of Bangladesh’s New Dawn) ಎಂಬ ಶೀರ್ಷಿಕೆಯ ಈ ಕಾಫಿ ಟೇಬಲ್ ಪುಸ್ತಕದ ಮುಖಪುಟದಲ್ಲಿ ಬಾಂಗ್ಲಾದೇಶದ ನಕ್ಷೆಯಂತೆ ಕಾಣುವ ಚಿತ್ರವಿದೆ. ಆದರೆ, ಕೆಲವು ಬಾಂಗ್ಲಾದೇಶದ ‘ಎಕ್ಸ್’ (ಹಿಂದಿನ ಟ್ವಿಟರ್) ಹ್ಯಾಂಡಲ್ಗಳು, ಈ ಚಿತ್ರವು ನಕ್ಷೆಯಲ್ಲ, ಬದಲಿಗೆ ಬಾಂಗ್ಲಾದೇಶದ ರಾಷ್ಟ್ರೀಯ ಧ್ವಜದ ಕಲಾಕೃತಿಯಾಗಿದೆ ಎಂದು ವಾದಿಸಿವೆ, ಆದರೂ ಅದು ನಕ್ಷೆಯನ್ನೇ ಹೋಲುತ್ತದೆ.
ಈ ಪುಸ್ತಕವನ್ನು ಶನಿವಾರ ಢಾಕಾದ ಸರ್ಕಾರಿ ಅತಿಥಿ ಗೃಹದಲ್ಲಿ ಜನರಲ್ ಸಹೀರ್ ಶಮ್ಶಾದ್ ಮಿರ್ಜಾ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಮೊಹಮ್ಮದ್ ಯೂನಸ್ ಅವರು ಉಡುಗೊಡೆಯಾಗಿ ನೀಡಿದ್ದಾರೆ. ಈ ಚಿತ್ರದ ವಿವಾದದ ಬಗ್ಗೆ ಬಾಂಗ್ಲಾದೇಶವು ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಪಾಕಿಸ್ತಾನದ ಜನರಲ್ ಜೊತೆ ಸಭೆಯ ನಂತರ, ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಹೇಳಿಕೆಯಲ್ಲಿ, “ಪಾಕಿಸ್ತಾನದ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷ ಜನರಲ್ ಸಹೀರ್ ಶಮ್ಶಾದ್ ಮಿರ್ಜಾ ಅವರು ಶನಿವಾರ ತಡರಾತ್ರಿ ಸರ್ಕಾರಿ ಅತಿಥಿ ಗೃಹ ಜಮುನಾದಲ್ಲಿ ಮುಖ್ಯ ಸಲಹೆಗಾರ ಪ್ರೊಫೆಸರ್ ಮೊಹಮ್ಮದ್ ಯೂನಸ್ ಅವರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದರು. ಸಭೆಯಲ್ಲಿ ಅವರು ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ರಕ್ಷಣಾ ಸಹಕಾರದ ಹೆಚ್ಚುತ್ತಿರುವ ಪ್ರಾಮುಖ್ಯತೆ ಸೇರಿದಂತೆ ಬಾಂಗ್ಲಾದೇಶ-ಪಾಕಿಸ್ತಾನ ಸಂಬಂಧಗಳಿಗೆ ಸಂಬಂಧಿಸಿದ ವ್ಯಾಪಕ ವಿಷಯಗಳ ಕುರಿತು ಚರ್ಚಿಸಿದರು,” ಎಂದು ತಿಳಿಸಿದ್ದಾರೆ.
ಈ ಹಿಂದೆಯೂ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಆಡಳಿತ ಮಂಡಳಿ ಸದಸ್ಯರು ಭಾರತದ ಭೂಪ್ರದೇಶವನ್ನು ಬಾಂಗ್ಲಾದೇಶದ ಭಾಗವೆಂದು ಪ್ರತಿಪಾದಿಸುವ ನಕ್ಷೆಗಳನ್ನು ಹಂಚಿಕೊಂಡಾಗ ಭಾರತವು ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿತ್ತು. ಡಿಸೆಂಬರ್ 2024 ರಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಪ್ರಮುಖ ಸಹಾಯಕ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್ ವಿರುದ್ಧ ಭಾರತವು ಢಾಕಾಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿತ್ತು. ಆ ಪೋಸ್ಟ್ನಲ್ಲಿ ಭಾರತದ ಕೆಲವು ಪ್ರದೇಶಗಳು ಬಾಂಗ್ಲಾದೇಶಕ್ಕೆ ಸೇರಬೇಕು ಎಂದು ಹೇಳಲಾಗಿತ್ತು.
ಪ್ರಚೋದನಕಾರಿ ಹೇಳಿಕೆಗಳಿಗೆ ಪರಿಚಿತರಾಗಿರುವ ಮಹ್ಫುಜ್ ಆಲಂ ಅವರು ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂನ ಭಾಗಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸುವ ನಕ್ಷೆಯನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ತೀವ್ರ ಆಕ್ರೋಶದ ನಂತರ ಅವರು ಆ ಪೋಸ್ಟ್ ಅನ್ನು ಅಳಿಸಿ ಹಾಕಿದ್ದರು.
ಈ ವರ್ಷದ ಆರಂಭದಲ್ಲಿ, ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶವನ್ನು “ಸಾಗರದ ಪಾಲಕ” (Guardian of the Ocean) ಎಂದು ಪ್ರಚಾರ ಮಾಡುವ ಮೂಲಕ ಚೀನಾವನ್ನು ಈ ಪ್ರದೇಶಕ್ಕೆ ಆಹ್ವಾನಿಸಿದ್ದರು. ಇದು ಭಾರತದಿಂದ ತೀವ್ರ ಪ್ರತಿಕ್ರಿಯೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಟೀಕೆಗೆ ಒಳಗಾಗಿತ್ತು.ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆರಂಭದಲ್ಲಿ ಬ್ಯಾಂಕಾಕ್ನಲ್ಲಿ ನಡೆದ BIMSTEC ಶೃಂಗಸಭೆಯ ಸಂದರ್ಭದಲ್ಲಿ ಮೊಹಮ್ಮದ್ ಯೂನಸ್ ಅವರೊಂದಿಗೆ ನಡೆದ ಸಭೆಯಲ್ಲಿ ಕಟುವಾದ ಸಂದೇಶವನ್ನು ನೀಡಿದ್ದರು.


