ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಸದ್ಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಇನ್ನು ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಹೊಸ ಸಿಜೆಐ ನೇಮಕ ಆಗಬೇಕಾಗಿದ್ದು, ನ್ಯಾ.ಸೂರ್ಯಕಾಂತ್ ಅವರ ಹೆಸರನ್ನು ಸೂಚಿಸಲಾಗಿದೆ ಎಂದು ವರದಿಯಾಗಿದೆ.
ನ್ಯಾ. ಬಿ.ಆರ್.ಗವಾಯಿ ಅವರು 2025ರ ನವೆಂಬರ್ 23ರಂದು ನಿವೃತ್ತಿಯಾಗಲಿದ್ದಾರೆ. ಸಾಂಪ್ರದಾಯಿಕವಾಗಿ, ನಿರ್ಗಮಿತ ಸಿಜೆಐ ಅಧಿಕಾರ ತ್ಯಜಿಸುವ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುತ್ತಾರೆ. ನ್ಯಾ. ಗವಾಯಿ ಅವರು ಈಗ ನ್ಯಾ.ಸೂರ್ಯಕಾಂತ್ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ.
ಕಾನೂನು ಮತ್ತು ನ್ಯಾಯ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರವು ಮುಂದಿನ ಮುಖ್ಯ ನ್ಯಾಯಮೂರ್ತಿ ನೇಮಕದ ಪ್ರಕ್ರಿಯೆ ಆರಂಭಿಸಿದೆ ಎಂದು ಎಎನ್ಐ ವರದಿ ಮಾಡಿದೆ,
ಅಧಿಕೃತ ಕಾರ್ಯವಿಧಾನದ ಪ್ರಕಾರ ಕಾನೂನು ಸಚಿವಾಲಯವು ಸಿಜೆಐ ಗವಾಯಿ ಅವರೊಂದಿಗೆ ಸಂಪರ್ಕ ಸಾಧಿಸಿದ್ದು, ತನ್ನ ಉತ್ತರಾಧಿಕಾರಿಯ ಶಿಫಾರಸಿಗೆ ಸೂಚಿಸಿದೆ.
ಯಾರಿದು ನ್ಯಾ. ಸೂರ್ಯಕಾಂತ್?
ನ್ಯಾ. ಸೂರ್ಯಕಾಂತ್ ಅವರು ಸದ್ಯ ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ಗವಾಯಿ ಹೊರತುಪಡಿಸಿ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. 1962ರ ಫೆ.10ರಲ್ಲಿ ಅವರು ಹರ್ಯಾಣದ ಹಿಸಾರ್ ನಲ್ಲಿ ಜನಿಸಿದ್ದರು.
ಸುಪ್ರೀಂ ಕೋರ್ಟ್ನ ಅಧಿಕೃತ ವೆಬ್ಸೈಟ್ನ ಪ್ರಕಾರ, ನ್ಯಾ. ಸೂರ್ಯಕಾಂತ್ ಅವರು 1984 ರಲ್ಲಿ ಹಿಸಾರ್ನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. 1985 ರಲ್ಲಿ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಚಂಡೀಗಢಕ್ಕೆ ತೆರಳಿದರು.
2018ರ ಅಕ್ಟೋಬರ್ 5ರಂದು ಅವರು ಹಿಮಾಚಲ ಪ್ರದೇಶ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕವಾದರು. 2019ರ ಮೇ 24ರಂದು ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.
ನ್ಯಾ. ಸೂರ್ಯಕಾಂತ್ ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಾಗಿದ್ದು, ಸಿಜೆಐ ಆಗಿ ನೇಮಕಗೊಂಡರೆ ಅವರು ಭಾರತದ 53 ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ನೇಮಕದ ನಂತರ, ಅವರು ನವೆಂಬರ್ 24 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಫೆಬ್ರವರಿ 9, 2027 ರವರೆಗೆ ಸುಮಾರು 15 ತಿಂಗಳ ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ.


