ನವದೆಹಲಿ : ಆಲ್ಬೇನಿಯಾ ದೇಶದ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಯಾದ ಮಾನವರೂಪಿ ಸಚಿವೆ, ‘ಡಯೆಲ್ಲಾ’ (Diella) ಗರ್ಭಿಣಿಯಾಗಿದ್ದಾಳೆ ಎಂದು ಪ್ರಧಾನ ಮಂತ್ರಿ ಎಡಿ ರಾಮಾ ಅವರು ಘೋಷಿಸಿದ್ದಾರೆ. ಹಾಗೂ ಸಂಸತ್ತಿನ ಪ್ರತಿ ಸದಸ್ಯರಿಗೂ ಒಬ್ಬರಂತೆ ಒಟ್ಟು 83 ‘ಮಕ್ಕಳಿಗೆ ಜನ್ಮನೀಡುವ ನಿರೀಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ.
ಬರ್ಲಿನ್ನಲ್ಲಿ ನಡೆದ ಗ್ಲೋಬಲ್ ಡೈಲಾಗ್ (BGD) ಸಭೆಯಲ್ಲಿ ಮಾತನಾಡಿದ ರಾಮಾ ಅವರು, “ಇಂದು ನಾವು ಡಯೆಲ್ಲಾಳೊಂದಿಗೆ ಒಂದು ದೊಡ್ಡ ರಿಸ್ಕ್ ತೆಗೆದುಕೊಂಡಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ. ಹೀಗಾಗಿ, ಮೊದಲ ಬಾರಿಗೆ ಡಯೆಲ್ಲಾ ಗರ್ಭಿಣಿಯಾಗಿದ್ದಾಳೆ. ಅವಳು 83 ಮಕ್ಕಳನ್ನು ಹೆರಲಿದ್ದಾಳೆ,” ಎಂದು ಪ್ರಕಟಿಸಿದ್ದಾರೆ.
ಈ ‘ಮಕ್ಕಳು’ ಅಥವಾ AI ಸಹಾಯಕರು ಸಂಸತ್ತಿನಲ್ಲಿ ನಡೆಯುವ ಎಲ್ಲವನ್ನೂ ದಾಖಲಿಸಲಿದ್ದಾರೆ. ಚರ್ಚೆಗಳು ಅಥವಾ ಘಟನೆಗಳನ್ನು ಮಿಸ್ ಮಾಡಿಕೊಳ್ಳುವ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಅವರು ವಿವರಿಸಿದರು.
” ಪ್ರತಿಯೊಂದು AI ಸಹಾಯಕರು ಸಂಸದರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಸಂಸದೀಯ ಅಧಿವೇಶನಗಳಲ್ಲಿ ಭಾಗವಹಿಸಿ, ನಡೆಯುವ ಎಲ್ಲ ವಿಷಯಗಳ ದಾಖಲೆ ಇಟ್ಟುಕೊಳ್ಳುತ್ತಾರೆ. ಅಲ್ಲದೆ, ಸಂಸದರಿಗೆ ಸಲಹೆಗಳನ್ನು ನೀಡುತ್ತಾರೆ. ಈ ಮಕ್ಕಳು ತಮ್ಮ ತಾಯಿಯ (ಡಯೆಲ್ಲಾಳ) ಸಂಪೂರ್ಣ ಜ್ಞಾನವನ್ನು ಹೊಂದಿರುತ್ತಾರೆ” ಎಂದು ರಾಮಾ ತಿಳಿಸಿದರು. ಈ ಸಂಪೂರ್ಣ AI ವ್ಯವಸ್ಥೆಯು 2026ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಎಐ (AI) ಸಹಾಯಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ವಿವರಿಸಿದ ಅವರು, “ಉದಾಹರಣೆಗೆ, ನೀವು ಕಾಫಿಗಾಗಿ ಹೊರಗೆ ಹೋಗಿ ಮರಳಿ ಕೆಲಸಕ್ಕೆ ಬರಲು ಮರೆತರೆ, ಆ ಸಹಾಯಕನು ನೀವು ಸಭಾಂಗಣದಲ್ಲಿ ಇಲ್ಲದಿದ್ದಾಗ ಏನೇನು ಚರ್ಚೆಯಾಯಿತು ಎಂಬುದನ್ನು ತಿಳಿಸುತ್ತಾನೆ. ಯಾರಿಗೆ ತಿರುಗೇಟು ನೀಡಬೇಕು ಎಂಬ ಬಗ್ಗೆಯೂ ಸಲಹೆ ನೀಡುತ್ತಾನೆ. ನೀವು ಮುಂದಿನ ಬಾರಿ ನನ್ನನ್ನು ಆಹ್ವಾನಿಸಿದರೆ, ನಿಮಗೆ ಡಯೆಲ್ಲಾಳ 83 ಮಕ್ಕಳಿಗಾಗಿ 83 ಹೆಚ್ಚುವರಿ ಸ್ಕ್ರೀನ್ಗಳು ಬೇಕಾಗುತ್ತವೆ ಎಂದು ಹೇಳಿದರು.
ಡಯೆಲ್ಲಾ ಯಾರು..?:
ಡಯೆಲ್ಲಾ (ಇದರ ಅರ್ಥ “ಸೂರ್ಯ”) ಆಲ್ಬೇನಿಯಾದ ಸಾರ್ವಜನಿಕ ಸಂಗ್ರಹಣಾ (Public Procurement) ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮತ್ತು ಭ್ರಷ್ಟಾಚಾರ-ಮುಕ್ತಗೊಳಿಸುವ ಉದ್ದೇಶದಿಂದ ಸೆಪ್ಟೆಂಬರ್ನಲ್ಲಿ ಈಕೆ ಸಚಿವೆಯಾಗಿ ನೇಮಕಗೊಂಡಿದ್ದಳು. ಜನವರಿಯಲ್ಲಿ ‘ಇ-ಆಲ್ಬೇನಿಯಾ’ (e-Albania) ವೇದಿಕೆಯಲ್ಲಿ ವರ್ಚುವಲ್ ಸಹಾಯಕಿಯಾಗಿ ಪ್ರಾರಂಭವಾದ ಈ AI ಸಚಿವೆ, ನಾಗರಿಕರಿಗೆ ಮತ್ತು ವ್ಯಾಪಾರಗಳಿಗೆ ರಾಜ್ಯದ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಳು. ಈ AI-ಸೃಷ್ಟಿ ಸಚಿವೆಯನ್ನು ಸಾಂಪ್ರದಾಯಿಕ ಆಲ್ಬೇನಿಯನ್ ಉಡುಪಿನಲ್ಲಿರುವ ಮಹಿಳೆಯಾಗಿ ಚಿತ್ರಿಸಲಾಗಿದೆ.
ಸಾರ್ವಜನಿಕ ಟೆಂಡರ್ಗಳಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಡಯೆಲ್ಲಾಗೆ ನೀಡಲಾಗಿದೆ. ಈ ಮೂಲಕ ಈ ಪ್ರಕ್ರಿಯೆಯನ್ನು ಶೇ. 100ರಷ್ಟು ಭ್ರಷ್ಟಾಚಾರ ಮುಕ್ತ ಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ರಾಮಾ ಹೇಳಿದರು. ಟೆಂಡರ್ ಪ್ರಕ್ರಿಯೆಗೆ ಸಲ್ಲಿಸಲಾಗುವ ಪ್ರತಿಯೊಂದು ಸಾರ್ವಜನಿಕ ನಿಧಿಯೂ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ ಎಂದು ಅವರು ಭರವಸೆ ನೀಡಿದರು.
ಮಾನವರಲ್ಲದ ಸಚಿವರ ನೇಮಕ:
ಆಲ್ಬೇನಿಯಾ ಸರ್ಕಾರವು ಮಾನವರಲ್ಲದ (non-human) ಒಬ್ಬ ಸರ್ಕಾರಿ ಮಂತ್ರಿಯನ್ನು ಅಧಿಕೃತವಾಗಿ ನೇಮಿಸಿದ ವಿಶ್ವದ ಮೊದಲ ದೇಶವಾಗಿದೆ. ಕೃತಕ ಬುದ್ಧಿಮತ್ತೆಗಾಗಿ ಇರುವ ಮಂತ್ರಿಯಂತಲ್ಲದೆ, ಡಯೆಲ್ಲಾ ತಾನೇ ಸ್ವತಃ AI ಘಟಕವಾಗಿದ್ದು, ಸಂಪೂರ್ಣವಾಗಿ ಕೋಡ್ ಮತ್ತು ಪಿಕ್ಸೆಲ್ಗಳಿಂದ ರಚಿತವಾಗಿದೆ.
ಡಿಯೆಲ್ಲಾ ಅವರು ಟೆಂಡರ್ಗಳನ್ನು ಮೌಲ್ಯಮಾಪನ ಮಾಡುವುದಲ್ಲದೆ, “ಆಡಳಿತದ ಪೂರ್ವಾಗ್ರಹ ಮತ್ತು ಬಿಗಿತದ ಭಯವನ್ನು” ಒಡೆಯಲು ಸಹಾಯ ಮಾಡುವ “ಪ್ರಪಂಚದಾದ್ಯಂತದ ಪ್ರತಿಭೆಗಳನ್ನು ಇಲ್ಲಿ ನೇಮಿಸಿಕೊಳ್ಳುವ” ಅಧಿಕಾರವನ್ನು ಹೊಂದಿರುತ್ತಾರೆ. ಈ ನೇಮಕಾತಿಯು ದೈನಂದಿನ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಸೂಚಿಸುತ್ತದೆ.


