ಖಾನಾಪುರ : ಗವಾಳಿ ಗ್ರಾಮದ ರೈತನ ಮೇಲೆ ಕಾಡೆಮ್ಮೆ ದಾಳಿ ನಡೆಸಿದ್ದು, ಶಾಸಕ ವಿಠ್ಠಲ ಹಲಗೇಕರ ಅವರು ಆಸ್ಪತ್ರೆಗೆ ಭೇಟಿ ನೀಡಿ ನೆರವಿನ ಭರವಸೆ ನೀಡಿದರು.
ಭೀಮಗಡ ಅಭಯಾರಣ್ಯ ವ್ಯಾಪ್ತಿಯ ಗವಾಳಿ ಗ್ರಾಮದ ರೈತ ಪ್ರಕಾಶ ಕೃಷ್ಣ ಗುರುವ (55) ಕಾಡೆಮ್ಮೆಯ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಯಿಂದ ಗ್ರಾಮ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಮೂಡಿದೆ.
ಗಾಯಗೊಂಡ ರೈತನನ್ನು ಗ್ರಾಮಸ್ಥರು ತಕ್ಷಣ ಖಾನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ವೈದ್ಯರ ಸಲಹೆಯಂತೆ ಅವರನ್ನು ಬೆಳಗಾವಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಶಾಸಕರ ಆದೇಶದ ಮೇರೆಗೆ ಕೆಎಲ್ಇ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಆಸ್ಪತ್ರೆಯ ಖರ್ಚನ್ನು ಶಾಸಕರು ಭರಿಸುವ ಭರವಸೆ ನೀಡಿದರು.
ಘಟನೆ ವಿಷಯ ತಿಳಿದ ತಕ್ಷಣ ಶಾಸಕ ವಿಠ್ಠಲ ಹಲಗೇಕರ ಅವರು ತಕ್ಷಣ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಧಾವಿಸಿ, ಗಾಯಗೊಂಡ ರೈತರ ಆರೋಗ್ಯ ವಿಚಾರಿಸಿದರು.
ಅವರು ಪ್ರಕಾಶ ಗುರುವ ಅವರ ಬಂಧುಬಳಗ ಹಾಗೂ ಗ್ರಾಮಸ್ಥರೊಂದಿಗೆ ಮಾತನಾಡಿ ಘಟನೆಯ ಸಂಪೂರ್ಣ ವಿವರ ತಿಳಿದು, ನಂತರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಲೈಲಾ ಶುಗರ್ಸ್ ಎಂ.ಡಿ. ಸದಾನಂದ ಪಾಟೀಲ ಉಪಸ್ಥಿತರಿದ್ದರು.
ಖಾನಾಪುರ ತಾಲೂಕಿನಲ್ಲಿ ನೈಸರ್ಗಿಕ ಆಪತ್ತು ಅಥವಾ ಕಾಡುಪ್ರಾಣಿಗಳ ದಾಳಿಯಂತಹ ಸಂಕಷ್ಟದ ಸಂದರ್ಭಗಳಲ್ಲಿ ತಕ್ಷಣ ಸಹಾಯಕ್ಕೆ ಧಾವಿಸುವ ಶಾಸಕರು ನಿಜವಾದ ಜನಸೇವಕರಾಗಿದ್ದಾರೆ. ಅವರ ತುರ್ತು ಸೇವಾ ಮನೋಭಾವ ಮತ್ತೆ ಎಲ್ಲರ ಮನ ಗೆದ್ದಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.


