ಬೆಳಗಾವಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ನಿರಂತರ ಊಹಾಪೋಹಗಳು ಕೇಳಿಬರುತ್ತಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರಂತಹವರಿಗೆ ‘ಮಾರ್ಗದರ್ಶಕರಾಗಿ’ರಬೇಕು ಎಂದು ಯತೀಂದ್ರ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ವರದಿಗಳನ್ನು ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿಹಾಕಿದ್ದರು. ಈ ಊಹಾಪೋಹಗಳಿಗೆ ಕಾಂಗ್ರೆಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಹೇಳಿಕೆಯೂ ಇಂಧನ ಒದಗಿಸಿತ್ತು. ಈ ವಿಷಯದ ಕುರಿತು ಉಂಟಾಗಿರುವ ಗೊಂದಲವನ್ನು ಪಕ್ಷದ ವರಿಷ್ಠರು ನಿವಾರಿಸಬೇಕು ಎಂದು ಅವರು ಆಗ್ರಹಿಸಿದ್ದರು.
“ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿಯಾಗುವುದು ಖಚಿತ. ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಕಠಿಣ ಪರಿಶ್ರಮಕ್ಕೆ ಯಾವಾಗಲೂ ಫಲ ಸಿಗುತ್ತದೆ” ಎಂದು ಶಿವರಾಮೇಗೌಡರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, “ನಾನು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ” ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.
ಪಕ್ಷವು ಈ ಎಲ್ಲಾ ವರದಿಗಳನ್ನು ನಿರಾಕರಿಸುತ್ತಿದ್ದರೂ, ಆಂತರಿಕ ಮೂಲಗಳ ಪ್ರಕಾರ – ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರನ್ನು ಬೆಂಬಲಿಸುವ ಎರಡು ವಿಭಿನ್ನ ಬಣಗಳು ಪಕ್ಷದಲ್ಲಿ ಸಕ್ರಿಯವಾಗಿವೆ. ಲೋಕೋಪಯೋಗಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಲಾಗುತ್ತದೆ.ಈ ಹಿನ್ನೆಲೆಯಲ್ಲಿ, ಬುಧವಾರದಂದು ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ ಮತ್ತು ಜಾರಕಿಹೊಳಿಯಂತಹವರಿಗೆ ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
“ಸತೀಶ ಜಾರಕಿಹೊಳಿ ಸಿದ್ದರಾಮಯ್ಯ ಸ್ಥಾನ ತುಂಬಬಲ್ಲರು”
ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಸಹ ಹಾಜರಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, “ನನ್ನ ತಂದೆ ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಈ ಹಂತದಲ್ಲಿ, ಅವರು ಬಲವಾದ ಸಿದ್ಧಾಂತ ಮತ್ತು ಪ್ರಗತಿಪರ ಮನಸ್ಥಿತಿ ಹೊಂದಿರುವ ನಾಯಕರಿಗೆ ‘ಮಾರ್ಗದರ್ಶಕ’ರಾಗಬೇಕು. ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಎತ್ತಿಹಿಡಿಯಬಲ್ಲ ಮತ್ತು ಪಕ್ಷವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲ ವ್ಯಕ್ತಿ ಎಂದರು.
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಾಗ, ಯತೀಂದ್ರ ಅವರು, ತಮ್ಮ ತಂದೆ 2028ರ ನಂತರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದರಿಂದ, ತಮ್ಮಂತೆಯೇ ನಂಬಿಕೆ ಇರುವವರಿಗೆ ಅವರು ಮಾರ್ಗದರ್ಶನ ನೀಡಬಹುದು ಎಂಬ ಅರ್ಥದಲ್ಲಿ ಮಾತ್ರ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
“ನಾನು ಕೇವಲ ನನ್ನ ತಂದೆ ಸಾಮಾಜಿಕ ನ್ಯಾಯ ಮತ್ತು ಕಾಂಗ್ರೆಸ್ ಪಕ್ಷದ ಜಾತ್ಯತೀತ ತತ್ವಗಳನ್ನು ನಂಬುವ ವ್ಯಕ್ತಿ ಎಂದು ಹೇಳಿದೆ. ಸತೀಶ ಜಾರಕಿಹೊಳಿ ಅವರು ಅದೇ ಆದರ್ಶಗಳು ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ನನ್ನ ತಂದೆ 2028 ರ ನಂತರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅಂತಹ ತತ್ವಗಳನ್ನು ಹೊಂದಿರುವ ಪಕ್ಷದ ಅನೇಕ ಯುವ ನಾಯಕರಿಗೆ ಅವರು ‘ಮಾರ್ಗದರ್ಶಕ’ರಾಗಬಹುದು ಎಂದು ಮಾತ್ರ ಹೇಳಿದ್ದೇನೆ” ಎಂದು ಯತೀಂದ್ರ ಸ್ಪಷ್ಟಪಡಿಸಿದರು.
ಉತ್ತರಾಧಿಕಾರಿ ಪ್ರಶ್ನೆಯ ಕುರಿತು ಪ್ರತಿಕ್ರಿಯಿಸಿದ ಅವರು, “ಹೌದು, ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯನವರ ನಿವೃತ್ತಿಯ ನಂತರ ಅವರ ಸ್ಥಾನವನ್ನು ತುಂಬುವ ಸಾಮರ್ಥ್ಯವನ್ನು ಖಂಡಿತಾ ಹೊಂದಿದ್ದಾರೆ. ಅವರು ಸೈದ್ಧಾಂತಿಕವಾಗಿ ಬದ್ಧರಾಗಿರುವ ಕೆಲವೇ ಸಮರ್ಥ ನಾಯಕರಲ್ಲಿ ಒಬ್ಬರು” ಎಂದು ಯತೀಂದ್ರ ಹೇಳಿದರು.
ಲೆಕ್ಕಾಚಾರದ ನಡೆ?
ಯತೀಂದ್ರ ಅವರ ಈ ಹೇಳಿಕೆಗಳು ಡಿ.ಕೆ. ಶಿವಕುಮಾರ ಮತ್ತು ಅವರ ಬೆಂಬಲಿಗರಿಗೆ ಒಂದು ಸಂದೇಶವನ್ನು ರವಾನಿಸುವ ಲೆಕ್ಕಾಚಾರದ ನಡೆಯಾಗಿರಬಹುದು. ಆ ಸಂದೇಶ ಏನೆಂದರೆ, ಅಧಿಕಾರವು ಸಿದ್ದರಾಮಯ್ಯ ಅವರ ಬಣದಲ್ಲಿಯೇ ಉಳಿಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಪ್ರತಿಕ್ರಿಯೆ ಕೇಳಿದಾಗ, “ಅವರು ಏನು ಹೇಳಿದರು ಎಂದು ನೀವೇ ಅವರನ್ನು ಕೇಳಬೇಕು, ನಾನು ಹೇಗೆ ಉತ್ತರಿಸಲಿ? ನನ್ನ ಬಗ್ಗೆ ಯಾರೂ ಚರ್ಚೆ ಮಾಡಬೇಕಾಗಿಲ್ಲ. ಹೈಕಮಾಂಡ್ ಮಾತನ್ನು ಕೇಳುತ್ತೇವೆ ಮತ್ತು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ನಾನು ಸ್ಪಷ್ಟಪಡಿಸಿದ್ದೇವೆ. ನಾನು ಅದಕ್ಕೆ ಬದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ.