ಬೆಂಗಳೂರು: ದೀಪಾವಳಿಯ ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ.
ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದೆ. ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತಿದೆ. ದೀಪಾವಳಿಯ ಬಲಿಪಾಡ್ಯಮಿಯ ದಿನವಾದ ಅ.22ರಂದು ಎಲ್ಲ ಅಧಿಸೂಚಿತ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರಿಸಬೇಕು ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಮೌಖಿಕ ನಿರ್ದೇಶನದಂತೆ ಆದೇಶಿಸಿರುವುದಾಗಿ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಆ ದಿನ ಸಂಜೆ ಗೋಪೂಜೆ ನೆರವೇರಿಸಬೇಕು. ಗೋವುಗಳನ್ನು ಸ್ನಾನ ಮಾಡಿಸಿ ದೇವಸ್ಥಾನಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಬೇಕು. ಅಕ್ಕಿ, ಬೆಲ್ಲ, ಸಿಹಿ ತಿನಿಸು ಸೇರಿ ಗ್ರಾಸವನ್ನು ಹಸುವಿಗೆ ನೀಡಿ ಪೂಜಿಸಬೇಕು ಎಂದು ಸೂಚಿಸಿದ್ದಾರೆ.
ಇಲಾಖೆ ಆಯುಕ್ತರಿಂದ ಸೂಚನೆ:
ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ದಿನದಂದು (ಅ. 22) ಕಡ್ಡಾಯವಾಗಿ ಶಾಸ್ತ್ರೋಕ್ತ ಗೋಪೂಜೆ ನೆರವೇರಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರ ಟಿಪ್ಪಣಿ ಆಧರಿಸಿ ಮಂಗಳವಾರ ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ.