ಬೆಳಗಾವಿ :
ಸೋಮವಾರ ಇಲ್ಲಿ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನದ ಮೊದಲ ದಿನವೇ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.
ಸುವರ್ಣ ಸೌಧದಲ್ಲಿ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ವೀರ ಸಾವರ್ಕರ್ ಫೋಟೋ ಅಳವಡಿಸಲು ರಾಜ್ಯದ ಬಿಜೆಪಿ ಸರ್ಕಾರ ಮುಂದಾಗಿದೆ. 10 ಫೋಟೋಗಳನ್ನು ಹಾಕಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದ್ದು, ಸೋಮವಾರ ಅನಾವರಣ ಮಾಡಲಾಗುತ್ತದೆ ಎನ್ನಲಾಗಿದೆ.
ಈ ಮೊದಲಿನಿಂದಲೂ ವೀರ ಸಾವರ್ಕರ್ ಅವರನ್ನು ವಿರೋಧಿಸಿಕೊಂಡು ಬಂದಿರುವ ಕಾಂಗ್ರೆಸ್ ಅವರ ಫೋಟೋ ಹಾಕಲು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸೋಮವಾರ ಬೆಳಗ್ಗೆ 10:30 ಕ್ಕೆ ಮಹಾಪುರುಷರ ಫೋಟೋಗಳನ್ನು ಅನಾವರಣ ಮಾಡಲಾಗುತ್ತದೆ. ಅವು ಯಾವುವು ಎನ್ನುವುದು ಸೋಮವಾರ ಗೊತ್ತಾಗಲಿದೆ. ಚಳಿಗಾಲದ ಅಧಿವೇಶನಕ್ಕೆ ಅಗತ್ಯವಾದ ಪೂರಕ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಿದಂತೆ ಈ ಸಲವು ಕಲಾಪ ನಡೆಸಲಾಗುತ್ತದೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಸಿದ್ದು ಪ್ರತಿಕ್ರಿಯೆ : ಸಾವರ್ಕರ್ ಅವರ ಫೋಟೋ ಅನಾವರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆಂದು ತಿಳಿಯಿತು. ಈ ಬಗ್ಗೆ ನೋಡಿ ಪ್ರತಿಕ್ರಿಯಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಸಾವರ್ಕರ್ ಮತ್ತು ಕರ್ನಾಟಕಕ್ಕೆ ಏನು ಸಂಬಂಧ ?
ಗಾಂಧಿ ಮತ್ತು ಅಂಬೇಡ್ಕರ್ ಫೋಟೋ ಅನಾವರಣ ಮಾಡುತ್ತಿವೆಂದು ಸ್ಪೀಕರ್ ಅವರ ಕಚೇರಿಯಿಂದ ಆಹ್ವಾನ ಬಂದಿದೆ. ಸಾವರ್ಕರ್ ಫೋಟೋ ಬಗ್ಗೆ ತಿಳಿದಿಲ್ಲ ಎಂದರು.