ವಿಜಯಪುರ: ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕಾರಣ ಬಸವನ ಬಾಗೇವಾಡಿಯಲ್ಲಿ ಶುಕ್ರವಾರ ಪೂರ್ವ ನಿಗದಿಯಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಸದ್ಗುರು ಶ್ರೀ ಸಿದ್ದೇರಾಮೇಶ್ವರ ಮಹಾರಾಜರ ಪುಣ್ಯತಿಥಿ ಉತ್ಸವ ಅಂಗವಾಗಿ ಬಸವನ ಬಾಗೇವಾಡಿ ಪಟ್ಟಣದ ಬಸವ ಭವನದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕನೇರಿ ಶ್ರೀಗಳು ವರ್ಚ್ಯುವಲ್ ಆಗಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಬೈಗುಳಗೊಳೊಂದಿಗೆ ಮಾತನಾಡುವುದು ನಮ್ಮ ಉತ್ತರ ಕರ್ನಾಟಕದ ಸೊಗಡು, ಇದು ಬೈದಂತಲ್ಲ, ತಿದ್ದಿಕೊಳ್ಳಲು ಆಡಿದ ಮಾತುಗಳಾಗಿವೆ, ಅಪಾರ್ಥ ಮಾಡಿಕೊಳ್ಳಬೇಡಿ, ನಾನು ಏನು ಮಾತನಾಡಿರುವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ’ ಎಂದು ಹೇಳಿದರು.
ಕನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ನಾಯಕರು, ಸಂತರ ಒಕ್ಕೂಟ ಹಾಗೂ ಸಾವಿರಾರು ಭಕ್ತರು ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ವಿವಿಧ ಮಠಾಧೀಶರು, ಭಕ್ತರು ಪ್ರತಿಭಟನೆ ನಡೆಸಿದರು.
ಸಂತರ ಒಕ್ಕೂಟದ ಅಧ್ಯಕ್ಷ ಶಂಕರಾನಂದ ಸ್ವಾಮೀಜಿ, ಬಿಜೆಪಿ ರಾಜ್ಯ ರೈತ ಮೊರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಡಾ.ಶ್ರದ್ಧಾನಂದ ಸ್ವಾಮೀಜಿ, ಬುರಣಾಪುರದ ಯೋಗೇಶ್ವರಿ ಮಾತಾಜಿ, ಬಂಜಾರಾ ಸಮುದಾಯದ ಗೋಪಾಲ ಮಹಾರಾಜ, ವಿಎಚ್ಪಿ ಮುಖಂಡ ಸುನೀಲ ಬೈರವಾಡಗಿ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಸುರೇಶ ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.