ಬೆಳಗಾವಿ: ‘ಅದ್ವಿತೀಯ ನಾಯಕತ್ವ ಗುಣಗಳನ್ನು ಹೊಂದಿದ್ದ ಬಸವಣ್ಣ ಅವರಿಗೆ ಮುಂದೊಮ್ಮೆ ವಿಶ್ವಸಂಸ್ಥೆಯೂ ಮನ್ನಣೆ ನೀಡಲಿದೆ’ ಎಂದು ಸಾಹಿತಿ ಡಾ.ಅವಿನಾಶ ಕವಿ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ದಾನಮ್ಮ ದೇವಿ ಮರಿಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘1948ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗವು ಒಬ್ಬ ನಾಯಕನಲ್ಲಿ ಇರಬೇಕಾದ ಗುಣಗಳ ಬಗ್ಗೆ ಘೋಷಣೆ ಮಾಡಿತು. ಆ ಪಟ್ಟಿಯಲ್ಲಿದ್ದ ಎಲ್ಲ ಗುಣಗಳು ಬಸವಣ್ಣ ಅವರಲ್ಲಿವೆ. ಅಂತೆಯೇ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳು ಸಿದ್ಧಪಡಿಸಿದ ಪಟ್ಟಿಯಲ್ಲಿನ ನಾಯಕತ್ವದ ಗುಣಗಳೂ ಬಸವಣ್ಣ ಅವರಲ್ಲಿವೆ. ಹಾಗಾಗಿ ಬಸವಣ್ಣ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಲ್ಲ. ಇಡೀ ಮಾನವ ಕುಲಕ್ಕೆ ಸಾಂಸ್ಕೃತಿಕ ನಾಯಕ. ಮುಂದೊಂದು ದಿನ ಇಡೀ ವಿಶ್ವ ಅವರನ್ನು ಗುರುತಿಸುತ್ತದೆ’ ಎಂದರು.
ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಆಶೀರ್ವಚನ ನೀಡಿದರು. ಮೃತ್ಯುಂಜಯ ಬೋಳಮಲ್ಲ ಇದ್ದರು. ಚನ್ನವೀರಸ್ವಾಮಿ ಹಿರೇಮಠ ಪ್ರವಚನ ನೀಡಿದರು. ದಾನಮ್ಮ ದೇವಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಬೆಂಬಳಗಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎಂ.ಕಿತ್ತೂರು ವಂದಿಸಿದರು. ರೋಹಿಣಿ ಬೆಂಬಳಗಿ ಮತ್ತು ರಾಜಶ್ರೀ ದೇಯಣ್ಣವರ ನಿರೂಪಿಸಿದರು.