ಅಹಮದಾಬಾದ್: 2030 ರ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಲು ಗುಜರಾತಿನ ಅಹಮದಾಬಾದ್ ನಗರವನ್ನು ಪ್ರಸ್ತಾವಿತ ಆತಿಥೇಯ ನಗರವನ್ನಾಗಿ ಕಾಮನ್ವೆಲ್ತ್ ಸ್ಪೋರ್ಟ್ನ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ.
ಕಾಮನ್ವೆಲ್ತ್ ಸ್ಪೋರ್ಟ್ನ ಸಂಪೂರ್ಣ ಸದಸ್ಯ ಮಂಡಳಿಗೆ ಈ ಶಿಫಾರಸು ಈಗ ಹೋಗಲಿದ್ದು, ನವೆಂಬರ್ 26ರಂದು ಗ್ಲಾಸ್ಗೋದಲ್ಲಿ ನಡೆಯುವ ಮಹಾಸಭೆಯಲ್ಲಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ.
ಪರಿಷ್ಕೃತ ನಿಯಮಗಳ ಅಡಿಯಲ್ಲಿ ಆಯ್ಕೆ:
ಕಾಮನ್ವೆಲ್ತ್ ಸ್ಪೋರ್ಟ್ ಮೌಲ್ಯಮಾಪನ ಸಮಿತಿಯು ನಡೆಸಿದ ಕೂಲಂಕಷ ಪರಿಶೀಲನಾ ಪ್ರಕ್ರಿಯೆಯ ನಂತರ ಅಹಮದಾಬಾದ್ ಅನ್ನು ಆಯ್ಕೆ ಮಾಡಲಾಗಿದೆ.
ತಾಂತ್ರಿಕ ಸಿದ್ಧತೆ, ಕ್ರೀಡಾಪಟುಗಳ ಅನುಭವ, ಮೂಲಸೌಕರ್ಯ, ಆಡಳಿತ ಮತ್ತು ಕಾಮನ್ವೆಲ್ತ್ ಸ್ಪೋರ್ಟ್ನ ಮೌಲ್ಯಗಳೊಂದಿಗಿನ ಹೊಂದಾಣಿಕೆಯಂತಹ ವಿವಿಧ ಅಂಶಗಳ ಆಧಾರದ ಮೇಲೆ ಸಮಿತಿಯು ಬಿಡ್ಗಳನ್ನು ಮೌಲ್ಯಮಾಪನ ಮಾಡಿದೆ. ‘ಗೇಮ್ಸ್ ರೀಸೆಟ್’ ತತ್ವಗಳ ಚೌಕಟ್ಟಿನಲ್ಲಿ ಈ ಮೌಲ್ಯಮಾಪನ ನಡೆಯಿತು. ಅಹಮದಾಬಾದ್ನ ಜೊತೆಗೆ, ನೈಜೀರಿಯಾದ ಅಬುಜಾ ಕೂಡಾ ಬಲವಾದ ಪ್ರಸ್ತಾವನೆ ಸಲ್ಲಿಸಿದೆ.
2030 ರ ಕ್ರೀಡಾಕೂಟವು ಐತಿಹಾಸಿಕ ಮೈಲಿಗಲ್ಲಾಗಿದ್ದು, 1930 ರಲ್ಲಿ ಕೆನಡಾದ ಹ್ಯಾಮಿಲ್ಟನ್ನಲ್ಲಿ ನಡೆದ ಮೊದಲ ಕಾಮನ್ವೆಲ್ತ್ ಗೇಮ್ಸ್ ನಂತರ 2030 ರ ಕ್ರೀಡಾಕೂಟಕ್ಕೆ 100 ವರ್ಷಗಳು ತುಂಬಿದ ಸಂಭ್ರಮವನ್ನು ಇದು ಗುರುತಿಸುತ್ತದೆ.
ಗುಜರಾತ್ ಸಿಎಂ ಸಂತಸ:
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ ಅವರು, “ಗುಜರಾತ್ ಮತ್ತು ಭಾರತಕ್ಕೆ ಇದು ಹೆಮ್ಮೆಯ ಕ್ಷಣ! 2030 ರ ಶತಮಾನೋತ್ಸವ ಕಾಮನ್ವೆಲ್ತ್ ಗೇಮ್ಸ್ಗೆ ಪ್ರಸ್ತಾವಿತ ಆತಿಥೇಯ ನಗರವಾಗಿ ಅಹಮದಾಬಾದ್ ಅನ್ನು ಕಾಮನ್ವೆಲ್ತ್ ಸ್ಪೋರ್ಟ್ನ ಕಾರ್ಯಕಾರಿ ಮಂಡಳಿ ಶಿಫಾರಸು ಮಾಡಿದೆ. ಅಹಮದಾಬಾದ್ ಅನ್ನು ಭಾರತದ ಕ್ರೀಡಾ ರಾಜಧಾನಿಯನ್ನಾಗಿ ಮಾಡುವ ನಮ್ಮ ದೃಷ್ಟಿಕೋನವನ್ನು ಈ ಐತಿಹಾಸಿಕ ಮೈಲಿಗಲ್ಲು ಮುಂದುವರಿಸಿದೆ,” ಎಂದು ಟ್ವೀಟ್ ಮಾಡಿದ್ದಾರೆ.
ವಿಕಸಿತ ಭಾರತದ ಕನಸಿಗೆ ಬಲ:
ಕಾಮನ್ವೆಲ್ತ್ ಸ್ಪೋರ್ಟ್ನ ಹಂಗಾಮಿ ಅಧ್ಯಕ್ಷರಾದ ಡಾ. ಡೊನಾಲ್ಡ್ ರುಕಾರೆ ಅವರು ಭಾರತ ಮತ್ತು ನೈಜೀರಿಯಾದ ದೂರದೃಷ್ಟಿಯ ಬಿಡ್ಗಳನ್ನು ಶ್ಲಾಘಿಸಿದರು ಮತ್ತು ಈ ನಿರ್ಧಾರವು ಕ್ರೀಡಾ ಚಳವಳಿಯ ಭವಿಷ್ಯಕ್ಕೆ ಮುಖ್ಯ ಎಂದು ಒತ್ತಿ ಹೇಳಿದರು. ಕಾಮನ್ವೆಲ್ತ್ ಗೇಮ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಪಿ.ಟಿ. ಉಷಾ ಅವರು ಈ ಅವಕಾಶವು ಯುವಕರಿಗೆ ಸ್ಫೂರ್ತಿ ನೀಡುವ ಮತ್ತು ಅಂತರರಾಷ್ಟ್ರೀಯ ಬಾಂಧವ್ಯವನ್ನು ಹೆಚ್ಚಿಸುವ ಮಹತ್ವದ ಗೌರವ ಎಂದು ಬಣ್ಣಿಸಿದ್ದಾರೆ.
“ಅಹಮದಾಬಾದ್ನಲ್ಲಿ ಶತಮಾನೋತ್ಸವ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸುವುದು ಭಾರತಕ್ಕೆ ಒಂದು ಅಸಾಧಾರಣ ಗೌರವ. ಈ ಕ್ರೀಡಾಕೂಟವು ಭಾರತದ ವಿಶ್ವ ದರ್ಜೆಯ ಕ್ರೀಡಾ ಮತ್ತು ಕಾರ್ಯಕ್ರಮ ಆಯೋಜಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದಲ್ಲದೆ, ‘ವಿಕಸಿತ ಭಾರತ 2047’ ರ ನಮ್ಮ ರಾಷ್ಟ್ರೀಯ ಪಯಣದಲ್ಲಿ ಅರ್ಥಪೂರ್ಣ ಪಾತ್ರ ವಹಿಸಲಿದೆ. 2030 ರ ಕ್ರೀಡಾಕೂಟವನ್ನು ನಮ್ಮ ಯುವಕರಿಗೆ ಪ್ರೇರಣೆ ನೀಡಲು, ಅಂತರರಾಷ್ಟ್ರೀಯ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಕಾಮನ್ವೆಲ್ತ್ನಾದ್ಯಂತ ಹಂಚಿಕೆಯ ಭವಿಷ್ಯಕ್ಕೆ ಕೊಡುಗೆ ನೀಡಲು ಒಂದು ಶಕ್ತಿಶಾಲಿ ಅವಕಾಶವಾಗಿ ನಾವು ನೋಡುತ್ತೇವೆ” ಎಂದು ಪಿ.ಟಿ. ಉಷಾ ಹೇಳಿದ್ದಾರೆ.