ಬೆಳಗಾವಿ : ರಾಜ್ಯದ ಎಲ್ಲಾ ಸರಕಾರಿ ಮತ್ತು ಅರೆ ಸರಕಾರಿ ಕಚೇರಿಗಳ ಮೇಲೆ ನಾಡಧ್ವಜ ಹಾರಿಸಲು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕನ್ನಡ ನಾಡಧ್ವಜವನ್ನು ಎಲ್ಲಾ ಸರಕಾರಿ ಕಚೇರಿಗಳ ಮೇಲೆ ಹಾರಿಸಲು 10 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಬೇಕು. ರಾಜ್ಯೋತ್ಸವಕ್ಕೆ ಮುನ್ನವೇ ನಾಡ ದ್ವಜ ಹಾರಿಸುವ ಕುರಿತು ಸರಕಾರ ಆದೇಶ ಹೊರಡಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕನ್ನಡ ಮತ್ತು ಸಂಸದೀಯ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಮಾನ್ಯತೆ ಪಡೆದ ಹೊಸ ವಿನ್ಯಾಸದ ಕನ್ನಡ ನಾಡ ಧ್ವಜ ಹಾರಿಸಲು ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿಲ್ಲ. ಆದರೂ ರಾಜ್ಯ ಸರ್ಕಾರ 2018 ರಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿತ್ತು. ಅಂದು ಪ್ರಸ್ತಾವ ಸಲ್ಲಿಸುವಾಗ ಅಧಿಕಾರಿಗಳು ಕನ್ನಡ ನಾಡ ಧ್ವಜ ಪದದ ಬದಲಿಗೆ ಕರ್ನಾಟಕ ರಾಜ್ಯದ ಧ್ವಜ ಎಂದು ನಮೂದಿಸಿ ಎಡವಟ್ಟು ಮಾಡಿದ್ದಾರೆ. ಇದು ರಾಜ್ಯದ ಪ್ರತ್ಯೇಕ ಧ್ವಜದ ಪ್ರಸ್ತಾಪ ಎಂದು ಭಾವಿಸಿದ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಅವರು ಹೇಳಿದರು.