ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಯವರು ಸರ್ಕಾರದ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದ ಬೆನ್ನಲ್ಲೇ ಕಲಬುರಗಿ ನಗರದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್ ಆರ್ಎಸ್ಎಸ್’ ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ.
ಅವರು ‘ಯಾರು ಭಾರತವನ್ನು ಪ್ರೀತಿಸುತ್ತಾರೋ, ಅವರು ಆರ್ ಎಸ್ ಎಸ್ ಅನ್ನೂ ಪ್ರೀತಿಸುತ್ತಾರೆ’ ಎಂದು ಇಲ್ಲಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೋಸ್ಟರ್ ಅಂಟಿಸುವ ಮೂಲಕ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆಗೆ ಭರ್ಜರಿ ಟಾಂಗ್ ನೀಡಿದ್ದಾರೆ. ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು, ಯುವ ಮುಖಂಡರು ನಗರದಲ್ಲಿ
ಪೋಸ್ಟರ್ ಅಂಟಿಸುವ ಅಭಿಯಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಸಂಘ ಪರಿವಾರ ರಾಷ್ಟ್ರಾದ್ಯಂತ ದೇಶಭಕ್ತಿಗೆ ಪ್ರೇರಣೆ ನೀಡುತ್ತದೆ, ಇದು ಸಚಿವರಿಗೆ ಗೊತ್ತಿಲ್ಲವೆ? ಸಂಘದ ಜನ್ಮ ಶತಾಬಿ ವರ್ಷಾಚರಣೆಯಲ್ಲಿ ಇಡೀ ದೇಶದ ಜನರೇ ಪಾಲ್ಗೊಂಡು ಹರ್ಷ ಪಡುತ್ತಿರುವಾಗ ಸಚಿವ ಖರ್ಗೆಯವರು ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಖರ್ಗೆ ಬರೆದ ಪತ್ರವನ್ನು ಉಗ್ರವಾಗಿ ಖಂಡಿಸಿದ್ದಾರೆ.