ಬೆಳಗಾವಿ: ಸೋಮವಾರದಂದು ಡಿಸಿಸಿ ಬ್ಯಾಂಕ್ ಚುನಾವಣೆ ಹಲವು ಮಹತ್ವದ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ಇಷ್ಟು ವರ್ಷಗಳವರೆಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಯಾವಾಗ ನಡೆದಯ ಹೋಗುತ್ತದೆ ಎಂದು ಯಾರ ಅರಿವಿಗೂ ಬರುತ್ತಿಲಿಲ್ಲ. ಅಷ್ಟೊಂದು ಗೌಪ್ಯವಾಗಿ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಜಿಲ್ಲೆಯ ಪ್ರಭಾವಿ ರಾಜಕೀಯ ಮನೆತನಗಳಾದ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಕತ್ತಿ ಅವರ ನಡುವಿನ ರಾಜಕೀಯ ಮೇಲಾಟದ ಫಲವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಭಾರಿ ಮಹತ್ವ ಪಡೆದುಕೊಂಡಿತ್ತು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಇಬ್ಬರ ನಡುವಿನ ಕದನಕ್ಕೆ ವೇದಿಕೆ ಒದಗಿಸಿ ಕೊಟ್ಟಿತ್ತು. ಈ ಚುನಾವಣೆಯಲ್ಲಿ ರಮೇಶ್ ಕತ್ತಿ ಅವರು ಮೇಲುಗೈ ಸಾಧಿಸಿದ್ದರು. ಎಲ್ಲಾ ಸ್ಥಾನಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಅವರು ಯಶಸ್ಸು ಸಾಧಿಸಿದ್ದರು. ಆದರೆ ಇದೀಗ ಆರಂಭವಾಗಿರುವ ಡಿಸಿಸಿ ಬ್ಯಾಂಕ್ ಚುನಾವಣೆಯ ಕಸರತ್ತು ಜಾನಕಿಹೊಳಿ ಮನೆತನದ ಮುನ್ನಡೆಗೆ ಕಾರಣವಾಗಿದೆ.
ಇಲ್ಲಿ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುವುದು ಬಹುತೇಕ ಖಚಿತ ಎನಿಸಿಕೊಂಡಿದೆ.
ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಚುನಾವಣಾ ಕಣವಾಗಿ ಮಾರ್ಪಟ್ಟಿದೆ. ಕಳೆದ ಮೂರು ದಶಕಗಳಿಂದ ರಮೇಶ್ ಕತ್ತಿ ಅವರು ಬೆಳಗಾವಿ ಡಿಸಿಸಿ ಬ್ಯಾಂಕ್ ಸಾರಥ್ಯ ವಹಿಸಿಕೊಂಡಿದ್ದರು. ಆದರೆ ಈ ಬಾರಿಯ ಚುನಾವಣೆ ಒಟ್ಟಾರೆ ಡಿಸಿಸಿ ಬ್ಯಾಂಕ್ ಇತಿಹಾಸವನ್ನೇ ಬದಲು ಮಾಡುವ ಸೂಚನೆಯನ್ನು ರವಾನಿಸಿದೆ.
ಅದರಲ್ಲೂ ಸೋಮವಾರ ನಡೆದ ಹಲವಾರು ವಿದ್ಯಮಾನಗಳು ಅಚ್ಚರಿಗೆ ಕಾರಣವಾದವು. ತೆರೆ ಮರೆಯಲ್ಲೇ ನಡೆದ ಈ ಬೆಳವಣಿಗೆಗಳು ಎಲ್ಲರ ಹುಬ್ಬೇರಿಸಲು ಕಾರಣವಾದವು. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಯಾರು ಶತ್ರುಗಳಿಲ್ಲ ಎಂಬ ಹೊಸ ಅಧ್ಯಾಯ ಬರೆಯಲು ಡಿಸಿಸಿ ಬ್ಯಾಂಕ್ ಚುನಾವಣೆ ಮುನ್ನುಡಿ ಬರೆಯಿತು.
ಡಿಸಿಸಿ ಬ್ಯಾಂಕಿನ ಚುನಾವಣೆಯ ನಾಮಪತ್ರ ಮರಳಿ ಪಡೆಯುವ ಕೊನೆಯ ದಿನ ಶಾಸಕ ಅಶೋಕ್ ಪಟ್ಟಣ್ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಯಾವುದೇ ವಿಶೇಷ ಕಾರಣವಿಲ್ಲ. ಯಾರಿಗೆ ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ. ಉಸ್ತುವಾರಿ ಸಚಿವರನ್ನು ಈ ವಿಷಯವಾಗಿ ಅಲ್ಲ. ಬೇರೆಯ ವಿಷಯವಾಗಿ ಭೇಟಿಯಾಗಿದ್ದೇವು. ನಮಗೆ ಸೋಲಿನ ಭೀತಿಯಿಲ್ಲ. ರಾಜಕೀಯದಲ್ಲಿ ಸಾಕಷ್ಟು ಕಾರಣಗಳಿರುತ್ತವೆ ಎಂದರು.
ಇನ್ನು ಸಂಪುಟ ವಿಸ್ತರಣೆ ಸಿಎಂ ಗೆ ಬಿಟ್ಟ ವಿಚಾರ. ಮೊದಲು ಸಚಿವ ಸ್ಥಾನ ನೀಡಲಿ. ನಂತರ ಖಾತೆಯ ಬಗ್ಗೆ ವಿಚಾರ ಮಾಡೋಣ. ಈ ಬಾರಿ ಶೇ. 99 ರಷ್ಟು ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂಬ ಆಸೆಯಿದೆ. ಮೊನ್ನೆಯೂ ಹೇಳಿದ್ದೇ ಇಂದು ಹೇಳುತ್ತೇನೆ. ನನ್ನದು ಯಾವುದೇ ಪೇನಲ್ ಅಲ್ಲ. ನಮ್ಮದು ಸಿದ್ಧರಾಮಯ್ಯ ಟೀಂ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಕಾಗವಾಡ ಕ್ಷೇತ್ರಕ್ಕೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರನ್ನಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಸಚಿವ ಸತೀಶ ಜಾರಕಿಹೊಳಿ, ಶಾಸಕ ರಾಜು ಕಾಗೆ , ಶ್ರೀಮಂತ ಪಾಟೀಲರು, ಶ್ರೀನಿವಾಸ ಪಾಟೀಲರೊಂದಿಗೆ ಚರ್ಚೆ ನಡೆಸಲಾಯಿತು. ಸಚಿವ ಸತೀಶ್ ಜಾರಕಿಹೊಳಿಯವರು ಶ್ರೀನಿವಾಸ ಪಾಟೀಲ ಅವರಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸೂಚಿಸಿದರು. ಹಾಗಾಗಿ, ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದರು.ರಾಜು ಕಾಗೆ ಅವರು ಹಿರಿಯ ರಾಜಕಾರಣಿ. ಅನುಭವ ಹೊಂದಿದವರು. ಆ ಭಾಗದ ಶಾಸಕರಿಗೆ ಅವಕಾಶ ನೀಡುವಂತೆ ನೀಡಿದ ಸಲಹೆ ಮೇರೆಗೆ ಶ್ರೀನಿವಾಸ ಪಾಟೀಲ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು. ಶ್ರೀನಿವಾಸ ಅವರಿಗೆ ಮುಂದೆ ಸಾಕಷ್ಟು ಅವಕಾಶಗಳಿವೆ ಎಂದರು.
ಕಾಗವಾಡ ತಾಲೂಕಿನಲ್ಲಿ ಎಲ್ಲರೂ ಸೇರಿ ತಾಲೂಕಿನ ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಈಗಾಗಲೇ ನಮ್ಮ ಪೆನಲ್ದಿಂದ 7 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 7 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ದೇವರು ಮತ್ತು ಜನರ ಆಶೀರ್ವಾದದಿಂದ ನಮ್ಮ ಪೆನಲ್ ಡಿಸಿಸಿ ಬ್ಯಾಂಕ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: 9ಜನ ಅವಿರೋಧ ಆಯ್ಕೆ
ಬೆಳಗಾವಿ: ಇಲ್ಲಿನ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಜಾರಕಿಹೊಳಿ ಹಾಗೂ ಜೊಲ್ಲೆ ಬಣದ 7 ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಅಣ್ಣಾಸಾಹೇಬ ಜೊಲ್ಲೆ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ವಿಶ್ವಾಸ ವೈದ್ಯ, ವಿರೂಪಾಕ್ಷ ಮಾಮನಿ, ಅರವಿಂದ ಪಾಟೀಲ, ರಾಹುಲ್ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ,ನೀಲಕಂಠ ಕಪ್ಪಲಗುದ್ದಿ ಹಾಗೂ ಸಚಿವ ಸತೀಶ ಜಾರಕಿಹೊಳಿ ಬೆಂಬಲಿತ ರಾಜು ಕಾಗೆ ಹಾಗೂ ಗಣೇಶ ಹುಕ್ಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
20ಜನ ನಾಮಪತ್ರ ವಾಪಸ್ ಪಡೆದುಕೊಂಡಿದ್ದು, ರಾಮದುರ್ಗ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಅಥಣಿ, ಹುಕ್ಕೇರಿ, ರಾಯಬಾಗ ತಾಲೂಕುಗಳಲ್ಲಿ ಅ.19 ರಂದು ಚುನಾವಣೆ ನಡೆಯಲಿದೆ. ಸೋಮವಾರ ನಾಮ ಪತ್ರ ಕೊನೆಯ ದಿನವಾಗಿದ್ದರಿಂದ ಶಾಸಕ ಅಶೋಕ ಪಟ್ಟಣ, ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಶ್ರೀನಿವಾಸ ಪಾಟೀಲ ಸೇರಿ 20 ಜನರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಸಿದ್ದ ಇತರರು ವಾಪಸ್ ಪಡೆದಿದ್ದರಿಂದ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇತರೆ ಸಂಘ ಸಂಸ್ಥೆಗಳ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಸಿದ್ದರು ಜಾರಕಿಹೊಳಿ ಬಣದ ರಾಜಕೀಯ ಕೌಶಲ್ಯ ಮತ್ತೊಮ್ಮೆ ಬೆಳಗಿದೆ. ಲೋಕೋಪಯೋಗಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಿಂದ ಕಾಗವಾಡ ಕ್ಷೇತ್ರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಯ್ಕೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಅದೃಷ್ಟ ಒಲಿದಿದೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆ ಅಂತಿಮ ಘಟ್ಟ ತಲುಪಿದ್ದು ಕಾಗವಾಡ ಶಾಸಕ ರಾಜು ಕಾಗೆ ಅವಿರೋಧ ಆಯ್ಕೆಯಾಗಿದ್ದಾರೆ. ಕಾಗವಾಡ ಕ್ಷೇತ್ರದಿಂದ ಶಾಸಕ ರಾಜು ಕಾಗೆ ಹಾಗೂ ಶ್ರೀನಿವಾಸ ಪಾಟೀಲ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಾಜು ಕಾಗೆ, ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲರೊಂದಿಗೆ ನಡೆದ ಸಮಾಲೋಚನೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಮಧ್ಯಸ್ಥಿಕೆ ವಹಿಸಿ, ಶ್ರೀನಿವಾಸ ಪಾಟೀಲ ಅವರಿಗೆ ನಾಮಪತ್ರ ಹಿಂದಕ್ಕೆ ಪಡೆಯಲು ಸಲಹೆ ನೀಡಿದರು. ಹೀಗಾಗಿ ಶಾಸಕ ರಾಜು ಕಾಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಒಟ್ಟಾರೆ ಜಾರಕಿಹೊಳಿ ಗೂಡಿಗೆ ಕಾಗೆ ಹಾರಿದೆ ಎಂಬಂತಾಗಿದೆ.