ಛತ್ತೀಸ್ಗಢ: ಛತ್ತೀಸ್ಗಢದ ಖೈರಾಗಢ ಜಿಲ್ಲೆಯ ಸಾರಾ ಗೋಂಡಿ ಗ್ರಾಮದಲ್ಲಿ, ಕಳೆದ ಎರಡು ದಶಕಗಳಿಂದ ತಾನು ಪೋಷಿಸಿದ ಅಶ್ವತ್ಥ ಮರ ಮರವನ್ನು ಅಕ್ರಮವಾಗಿ ಕಡಿದುಹಾಕಿದ ಕಾರಣ 85 ವರ್ಷದ ವೃದ್ಧೆಯೊಬ್ಬರು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆಯ ವೀಡಿಯೊ ವೈರಲ್ ಆಗಿದೆ.
ದಿಯೋಲಾ ಬಾಯಿ ಎಂಬ ಈ ವೃದ್ಧೆ ಸುಮಾರು 20 ವರ್ಷಗಳ ಹಿಂದೆ ತಮ್ಮ ಮನೆಯ ಜಾಗದಲ್ಲಿ ಚಿಕ್ಕ ಅಶ್ವತ್ಥ ಸಸಿಯನ್ನು ನೆಟ್ಟು ಅದನ್ನು “ತನ್ನ ಸ್ವಂತ ಮಗುವಿನಂತೆ” ಆರೈಕೆ ಮಾಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಅವರು ಪ್ರತಿ ಮರಕ್ಕೆ ನೀರುಣಿಸುತ್ತಿದ್ದರು. ವರದಿಯ ಪ್ರಕಾರ, ಲಾಭಕ್ಕಾಗಿ ಈ ಮರವನ್ನು ಕತ್ತರಿಸಲಾಗಿದೆ.
ಘಟನೆಯಿಂದ ತೀವ್ರವಾಗಿ ನೊಂದ ವೃದ್ಧೆ, ಕಡಿದ ಮರದ ಬುಡಕ್ಕೆ ತಲೆಯಿಟ್ಟು ಜೋರಾಗಿ ಅಳುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದ್ದು, ಮರದ ಬಗೆಗಿನ ವೃದ್ಧೆಯ ಅದಮ್ಯ ಪ್ರೀತಿಗೆ ನೋಡಿದವರ ಮನ ಕರಗಿದೆ. ಕೇಂದ್ರ ಸಚಿವ ಕಿರಣ ರಿಜಿಜು ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
“ಇದು ಹೃದಯ ವಿದ್ರಾವಕ ದೃಶ್ಯವಾಗಿದೆ. 20 ವರ್ಷಗಳ ಹಿಂದೆ ತಾನು ನೆಟ್ಟ ಅಶ್ವತ್ಥ ಮರವನ್ನು ಕಡಿದಿದ್ದಕ್ಕೆ ವೃದ್ಧೆಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇದು ಛತ್ತೀಸ್ಗಢ ರಾಜ್ಯದಲ್ಲಿ ನಡೆದಿದೆ ಎಂದು ನನಗೆ ತಿಳಿದು ಬಂದಿದೆ” ಎಂದು ರಿಜಿಜು ಅವರು ‘ಎಕ್ಸ್’ (X) ನಲ್ಲಿ ಬರೆದುಕೊಂಡಿದ್ದಾರೆ.
ಘಟನೆ ಮತ್ತು ಕ್ರಮ:
ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಪ್ರಕಾರ, ಅಕ್ಟೋಬರ್ 5 ರ ಬೆಳಿಗ್ಗೆ ಖೈರಾಗಢದ ಇಮ್ರಾನ್ ಮೆಮೊನ್ ತನ್ನ ಸಹಚರನೊಂದಿಗೆ ಮರವನ್ನು ಕಡಿಯಲು ಪ್ರಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ಬಂದು ಅವರನ್ನು ತಡೆದಿದ್ದರು. ಆದರೆ, ಮಾರನೆಯ ಬೆಳಿಗ್ಗೆ ಮರವನ್ನು ಬುಡ ಸಮೇತ ಕಡಿದು ಹಾಕಲಾಗಿತ್ತು.
ಈ ಸಂಬಂಧ ಖೈರಾಗಢ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ) ಮತ್ತು ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಖೈರಾಗಢ-ಛುಯಿಖಡಾನ್-ಗಂಡೈ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಖೈರಾಗಢ ಪೊಲೀಸ್ ಠಾಣಾಧಿಕಾರಿ ಅನಿಲ ಶರ್ಮಾ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು, ಮೆಮೊನ್ ಇತ್ತೀಚೆಗೆ ಖರೀದಿಸಿದ ನಿವೇಶನದ ಮುಂಭಾಗದಲ್ಲಿರುವ ಸರ್ಕಾರಿ ಜಮೀನನ್ನು ಸಮತಟ್ಟು ಮಾಡಲು ಬಯಸಿದ್ದ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಕಾರಣಕ್ಕಾಗಿ, ಪ್ರಕಾಶ ಕೋಸ್ರೆ ಎಂಬಾತನ ಸಹಾಯ ಪಡೆದಿದ್ದ. ಕೋಸ್ರೆ ಕಟ್ಟರ್ ಯಂತ್ರವನ್ನು ಬಳಸಿ ಮರವನ್ನು ಕಡಿದಿದ್ದಾನೆ ಎಂದು ಆರೋಪಿಸಲಾಗಿದೆ..ಕೃತ್ಯದ ನಂತರ, ಇಬ್ಬರೂ ಖೈರಾಗಢಕ್ಕೆ ಪರಾರಿಯಾಗಿ, ಕಟ್ಟರ್ ಯಂತ್ರವನ್ನು ನದಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಅದನ್ನು ಪತ್ತೆಹಚ್ಚಲು ಈಜುಗಾರರನ್ನು ನಿಯೋಜಿಸಲಾಗಿದೆ.