ಬೆಳಗಾವಿ : ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನ ಜತೆ ಓಡಿ ಹೋದ ಮಗಳ ತಿಥಿ ನಡೆಸಿದ ತಂದೆ ಊರವರಿಗೆಲ್ಲ ಊಟ ಹಾಕಿಸಿದ ವಿದ್ಯಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಘಟನೆ ನಡೆದಿದೆ ಎಂದು ವರದಿಯಾಗಿದೆ. 19 ವರ್ಷದ ಯುವತಿ ತಾನು ಪ್ರೀತಿಸಿದ ಯುವಕ ಜತೆ ಮನೆ ಬಿಟ್ಟು ಓಡಿ ಹೋದ ಹಿನ್ನಲೆಯಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಓಡಿಹೋದ ಮಗಳ ತಿಥಿ ಮಾಡಿ ಇಡೀ ಊರಿಗೆ ಊಟ ಹಾಕಿಸಿದ ಘಟನೆ ನಡೆದಿದೆ.
ʼʼಭಾವಪೂರ್ಣ ಶ್ರದ್ಧಾಂಜಲಿ; ಮರಣ ದಿನಾಂಕ ಅಕ್ಟೋಬರ್ 9, 2025ʼʼ ಎಂದು ಬರೆದು ಆಕೆಯ ಫೋಟೊವನ್ನು ಒಳಗೊಂಡ ಬ್ಯಾನರ್ ಊರಿನಲ್ಲಿ ಅಳವಡಿಸಿ ಅದಕ್ಕೆ ಹೂವಿನ ಹಾರ ಹಾಕಿದ್ದಾರೆ. ಅಲ್ಲದೆ, ಸಂಬಂಧಿಕರು ಹಾಗೂ ಗ್ರಾಮಸ್ಥರನ್ನು ಕರೆದು ತಿಥಿ ಊಟ ಹಾಕಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಅವರ ಪುತ್ರಿ ಅದೇ ಗ್ರಾಮದ ವಿಠ್ಠಲ ಬಸ್ತವಾಡೆ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಶಿವಗೌಡ ಸೇರಿದಂತೆ ಆಕೆಯ ಮನೆಯವರು ಇದನ್ನು ವಿರೋಧಿಸಿದ್ದಾರೆ. ಆದರೆ ಆಕೆಗೆ ತಿಳಿ ಹೇಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೂ ಆಕೆ ಪ್ರಿಯಕರನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ.
ಮಗಳು ಮನೆಗೆ ಬಾರದಿದ್ದಾಗ ಗಾಬರಿಗೊಂಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ಬಳಿಕ ಅವರಿಗೆ ತಮ್ಮ ಮಗಳು ತಾನು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ಗೊತ್ತಾಯಿತು. ಇದರಿಂದ ಮನನೊಂದ ಅವರು ಆಕೆ ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ಊರಿನಲ್ಲಿ ಶ್ರದ್ಧಾಂಜಲಿ ಬ್ಯಾನರ್ ಅಳವಡಿಸಿದ್ದಾರೆ. ಹಾಗೂ ತಿಥಿ ನೆರವೇರಿಸಿ ಊರವರನ್ನು ಕರೆದು ಊಟ ಹಾಕಿಸಿದ್ದಾರೆ ಎಂದು ವರದಿಯಾಗಿದೆ.