ಬೆಳಗಾವಿ :
ಸಮಾಜ ಹಿತವನ್ನು ಸಾಧಿಸಲಾಗದ್ದು ಸಾಹಿತ್ಯವೇ ಅಲ್ಲ. ಬರೆಯುವವರು ಸಮಾಜಹಿತವನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು” ಎಂದು ಅ. ಭಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬ ಮತ್ತು ನಾಲ್ಕನೇ ಜಿಲ್ಲಾ ಸಮ್ಮೇಳನದ ಸ್ಮರಣ ಸಂಚಿಕೆ ಚುಟುಕು ಸಂಭ್ರಮ ಹಾಗೂ ರಾಜ್ಯ ಪ್ರಾತಿನಿಧಿಕ ಸಂಕಲನ ಚುಟುಕು ಪಾರಿಜಾತಗಳನ್ನು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಸವಾದಿ ಶಿವಶರಣರ ವಚನಗಳು ಮಾನವೀಯ ಮೌಲ್ಯಗಳಿಂದೊಡಗೂಡಿ ಸಾಮಾಜಿಕ ಪರಿವರ್ತನೆಯ ಕೆಲಸ ಮಾಡಿದ್ದನ್ನು ಇಂದು ನೆನಪಿಸಿಕೊಳ್ಳಬೇಕಾಗಿದೆ. ಹಾಗೆಯೇ ಚುಟುಕುಗಳು, ಹನಿಗವನಗಲು,ಮುಕ್ತಕಗಳು ತಮ್ಮ ಮಾರ್ಮಿಕ ಅರ್ಥಪೂರ್ಣ ರಚನೆಗಳಿಂದ ನಮ್ಮ ಗಮನ ಸೆಳೆಯುತ್ತವೆ. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು 25 ವರ್ಷಗಳ ದೀರ್ಘಕಾಲದಿಂದ ಚುಟುಕು ಸಾಹಿತಿಗಳನ್ನು ಪ್ರೋತ್ಸಾಹಿಸುತ್ತ ಬಂದಿರುವುದು ಶ್ಲಾಘನೀಯವಾಗಿದೆ” ಎಂದು ಹೇಳಿದರು.
ಸುನಂದಾ ಮುಳೆ ಪ್ರಾರ್ಥಿಸಿದರು. ಡಾ. ಸಿ. ಕೆ. ಜೋರಾಪುರ ಸ್ವಾಗತಿಸಿದರು. ಬಸವರಾಜ ಗಾರ್ಗಿ ಪರಿಚಯಿಸಿದರು. ಆನಂದ ಪುರಾಣಿಕರಿಂದ ಗ್ರಂಥಗೌರವಗಳಾದವು. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟಕರ ಮತ್ತು ಕಟ್ಟೀಮನಿ ಟ್ರಸ್ಟ್ ಅಧ್ಯಕ್ಷ ಡಾ. ವೈ. ಬಿ. ಹಿಮ್ಮಡಿ ಅವರನ್ನು ಸನ್ಮಾನಿಸಲಾಯಿತು. ಚುಟುಕು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಅಪ್ಪಾಸಾಹೇಬ ಅಲಿಬಾದಿ ಅವರ ಎರಡು ಚುಟುಕು ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ಬೆಳ್ಳಿಹಬ್ಬದ ಯಶಸ್ಸಿಗಾಗಿ ಶ್ರಮಿಸಿದ ಪದಾಧಿಕಾರಿಗಳನ್ನು ಮತ್ತು ತಾಲೂಕು ಕಾರ್ಯದರ್ಶಿಗಳನ್ನು ಜಿಲ್ಲಾ ಚುಸಾಪ ವತಿಯಿಂದ ಸತ್ಕರಿಸಲಾಯಿತು. ಎಲ್. ಎಸ್. ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ನವಲಗುಂದ ವಂದಿಸಿದರು. ಅಶೋಕ ಮಳಗಲಿ ನಿರೂಪಿಸಿದರು.