ಬೆಳಗಾವಿ:
ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ಇದೀಗ ಮತ್ತೆ ಕುತೂಹಲ ಕೆರಳಿಸಿದೆ. ವಾರದ ಹಿಂದೆ ನಡೆದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕತ್ತಿ ಮತ್ತು ಜಾರಕಿಹೊಳಿ ಬಣಗಳ ನಡುವೆ ತೀವ್ರ ಸೆಣಸಾಟ ನಡೆದಿತ್ತು.
ಆದರೆ ಅಲ್ಲಿ ಕತ್ತಿ ಮೇಲುಗೈ ಸಾಧಿಸಿದ್ದರು. ಮಾತ್ರವಲ್ಲ ಎಲ್ಲಾ ಸ್ಥಾನಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಆ ಸೆಣಸಾಟ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮರುಕಳಿಸುತ್ತದೆ ಎಂಬ ಮುನ್ಸೂಚನೆಯನ್ನು ಆ ಚುನಾವಣೆ ರವಾನಿಸಿತ್ತು. ಆದರೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಇದೀಗ ಜಾರಕಿಹೊಳಿ ಬಣ ಮಹತ್ವದ ಮುನ್ನಡೆ ಸಾಧಿಸಿರುವುದು ವಿಶೇಷವಾಗಿದೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ಬಣಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಆಗಿದೆ. ಜಾರಕಿಹೊಳಿ ಬಣದ 6 ಜನರು ನಿರ್ದೇಶಕ ಸ್ಥಾನಕ್ಕೆ ಅವರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ನ 16 ನಿರ್ದೇಶಕ ಸ್ಥಾನಗಳ ಪೈಕಿ ಜಾರಕಿಹೊಳಿ ಬಣದ ಬಹುತೇಕ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಚಿಕ್ಕೋಡಿಯಿಂದ ಗಣೇಶ ಹುಕ್ಕೇರಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಮೂಡಲಗಿಯಿಂದ ನೀಲಕಂಠ, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ಗೋಕಾಕನಿಂದ ರಮೇಶ ಜಾರಕಿಹೊಳಿ ಪುತ್ರ ಅಮರನಾಥ, ಬೆಳಗಾವಿಯಿಂದ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು.
ಅಕ್ಟೋಬರ್ 13ರಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.