ಬೆಂಗಳೂರು:ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಮುಟ್ಟಿನ ರಜೆ ಅಥವಾ ಋತು ಚಕ್ರ ರಜೆ ನೀಡುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ, ಖಾಸಗಿ, ಕೈಗಾರಿಕಾ ವಲಯಗಳಲ್ಲಿ ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ನೀಡಲಾಗುವುದು ಎಂದು ಹೇಳಿದರು.
1992ರಲ್ಲಿ ದೇಶದಲ್ಲಿ ಬಿಹಾರ ರಾಜ್ಯದಲ್ಲಿ ಮೊದಲ ಬಾರಿಗೆ ವೇತನ ಸಹಿತ ಎರಡು ದಿನ ಮುಟ್ಟಿನ ರಜೆ ಜಾರಿಯಾಯಿತು. ಬಳಿಕ ಕೆಲ ನಿರ್ಬಂಧಗಳ ಜೊತೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿಯೂ ಜಾರಿಗೆ ಬಂದಿದೆ. ಇದೀಗ ಕರ್ನಾಟಕದಲ್ಲಿಯೂ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದರಿಂದ ವರ್ಷಕ್ಕೆ ಒಟ್ಟು 12 ದಿನಗಳು ಹೆಚ್ಚಿನ ರಜೆ ಸಿಗಲಿದೆ.
ಗೃಹ ಕಾರ್ಮಿಕ (ಡೊಮೆಸ್ಟಿಕ್ ವರ್ಕರ್ಸ್)ರಿಗೆ ಕ್ಷೇಮಾಭಿವೃದ್ಧಿ ಮತ್ತು ಕಲ್ಯಾಣ ನಿಧಿ ಸ್ಥಾಪಿಸಲು ಮುಂದಾಗಿರುವ ಕಾರ್ಮಿಕ ಇಲಾಖೆ, ಅದಕ್ಕೂ ಮುನ್ನ ಋತುಚಕ್ರ ರಜೆ
ಜಾರಿಗೊಳಿಸಿದೆ.
ಈ ನೀತಿಯು ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಐಟಿ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ರಾಜ್ಯದ ಇತರ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಒಳಗೊಳ್ಳುತ್ತದೆ.
ಈ ಬಗ್ಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಳೆದ ಒಂದು ವರ್ಷದಿಂದ ಇಲಾಖೆ ಈ ಬಗ್ಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. “ಹಲವು ಆಕ್ಷೇಪಣೆಗಳು ಬಂದವು, ಇತರ ಇಲಾಖೆ ಸಮಾಲೋಚನೆಗಳು ನಡೆದವು. 10-12 ಗಂಟೆಗಳ ಕಾಲ ಕೆಲಸ ಮಾಡುವ ಮಹಿಳೆಯರು ಬಹಳಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅವರಿಗೆ ಒಂದು ದಿನದ ರಜೆ ನೀಡಲು ಮುಂದಾಗಿದ್ದೇವೆ. ಇದು ಪ್ರಗತಿಪರ ಹೆಜ್ಜೆಯಾಗಿದೆ. ಅವರಿಗೆ ತಿಂಗಳಲ್ಲಿ ಒಂದು ದಿನ ತೆಗೆದುಕೊಳ್ಳುವ ಆಯ್ಕೆ ಇದೆ. ಅದನ್ನು ದುರುಪಯೋಗ ಪಡಿಸಿಕೊಳ್ಳಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಿಯಮಗಳಿಗೆ ಏನನ್ನಾದರೂ ಸೇರಿಸಬೇಕಾದರೆ, ಮುಂದಿನ ದಿನಗಳಲ್ಲಿ ನಾವು ಅದನ್ನು ಮಾಡುತ್ತೇವೆ” ಎಂದು ಲಾಡ್ ಹೇಳಿದರು.
ಕರ್ನಾಟಕದಲ್ಲಿ 60 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಇಲಾಖೆ ಅಂದಾಜಿಸಿದೆ, ಇದರಲ್ಲಿ 25-30 ಲಕ್ಷ ಮಹಿಳೆಯರು ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಿಯಮ ಜಾರಿಗೆ ಬರುವ ಮೊದಲು ಇಲಾಖೆಯು ಎಲ್ಲಾ ಉದ್ಯೋಗದಾತರೊಂದಿಗೆ ಮತ್ತೊಂದು ಜಾಗೃತಿ ಸಭೆ ನಡೆಸುವ ಸಾಧ್ಯತೆಯಿದೆ.
ಆರಂಭದಲ್ಲಿ ವರ್ಷಕ್ಕೆ ಆರು ಮುಟ್ಟಿನ ರಜೆಗಳನ್ನು ನೀಡುವ ಬಗ್ಗೆ ಯೋಚಿಸಲಾಗಿತ್ತು; ಆದರೆ ಬಳಿಕ ಕಾರ್ಮಿಕ ಇಲಾಖೆಯು ಅದನ್ನು ತಿಂಗಳಿಗೆ ಒಂದು ರಜೆಯಂತೆ ನೀಡಲು ನಿರ್ಧರಿಸಿತು.
ಸ್ವಿಗ್ಗಿ ಮತ್ತು ಜೊಮಾಟೊ ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು ಈಗಾಗಲೇ ಮಹಿಳಾ ವಿತರಣಾ ಕೆಲಸಗಾರರಿಗೆ ಮುಟ್ಟಿನ ರಜೆಯನ್ನು ನೀಡುತ್ತಿವೆ. ಸ್ವಿಗ್ಗಿ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಎರಡು ದಿನಗಳ ರಜೆಯನ್ನು ನೀಡಿದರೆ, ಜೊಮಾಟೊ ವಾರ್ಷಿಕವಾಗಿ 10 ದಿನಗಳ ವೇತನ ಸಹಿತ ರಜೆಯನ್ನು ನೀಡುತ್ತದೆ.