ಬೆಳಗಾವಿ:
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಕಾಲಕ್ಕೆ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕುಟುಂಬಗಳ ನಡುವೆ ತೀವ್ರ ವಾಕ್ಸಮರ ನಡೆದಿತ್ತು.
ಈ ಚುನಾವಣೆ ಗೆಲ್ಲಲು ಎರಡು ಕುಟುಂಬಗಳು ಇನ್ನಿಲ್ಲದ ಕಸರದ್ದು ನಡೆಸಿದ್ದವು. ಆ ಸಂದರ್ಭದಲ್ಲಿ ನಡೆದ ವಾಗ್ವಾದ, ವಾಕ್ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಸಮರ ಇನ್ನೂ ತಾರಕಕ್ಕೇರುವ ಲಕ್ಷಣಗಳು ಕಂಡುಬಂದಿವೆ. ಮಾಜಿ ಸಚಿವ ಹಾಗೂ ಶಾಸಕರು ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಈ ಬಗ್ಗೆ ಮಹತ್ವದ ಹೇಳಿಕೆ ನೀಡಿರುವುದು ಡಿಸಿಸಿ ಬ್ಯಾಂಕ್ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗುವ ಸಾಧ್ಯತೆ ಇದೆ.
ದೀಪಾವಳಿ ನಂತರ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಬೆಮುಲ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ತಮ್ಮ ಬಣದ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನಂತರ ಅವರು ಪತ್ರಕರ್ತರ ಜೊತೆ ಮಾತನಾಡಿದರು.
ನಮ್ಮನ್ನು ಹಾಗೂ ಜಾರಕಿಹೊಳಿ ಕುಟುಂಬವನ್ನು ಟೀಕಿಸುವವರಿಗೆ ಕಾನೂನು ಮೂಲಕ ಉತ್ತರ ಕೊಡುತ್ತೇವೆ. 20 ದಿನಗಳಿಂದ ನಮ್ಮ ವಿರುದ್ಧ ಬಹಳ ಮಾತನಾಡಿದ್ದಾರೆ. ನಾವು ನಿಂದಿಸುವುದಿಲ್ಲ. ಎಲ್ಲವನ್ನೂ ಕೇಳಿ ಸುಮ್ಮನಿದ್ದೇವೆ. ಆದರೆ ಇನ್ನೂ ಸುಮ್ಮನಿರುವುದಿಲ್ಲ. ಕಾನೂನು ಮೂಲಕ ಪ್ರತ್ಯುತ್ತರ ಕೊಡುತ್ತೇವೆ. ನಮ್ಮ ಕುಟುಂಬ ಮಾತ್ರವಲ್ಲ, ನಮ್ಮ ಪೆನಲ್ ಸದಸ್ಯರು ಕಾನೂನು ಸಮರಕ್ಕೆ ಮುಂದಾಗಲಿದ್ದಾರೆ. ಜಾರಕಿಹೊಳಿ ಕುಟುಂಬದ ಬಗ್ಗೆ ವೈಯಕ್ತಿಕ ತೇಜೋವಧೆ ಮಾಡುವವರ ಕುರಿತು ಏನು ಹೇಳುವುದಿಲ್ಲ. ದೀಪಾವಳಿ ನಂತರ ಕಾನೂನು ಹೋರಾಟ ನಡೆಯಲಿದ್ದು ಆಗ ಬ್ರೇಕಿಂಗ್ ಸುದ್ದಿ ಕೊಡುತ್ತೇವೆ ಎಂದು ಅವರು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ಚುನಾವಣೆ ಕಾಲಕ್ಕೆ ನಡೆದ ಎದುರಾಳಿಗಳ ಆರೋಪಕ್ಕೆ ಸೂಕ್ತ ಉತ್ತರ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ.
ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಆಗಿರುವ ಮಾಜಿ ಸಂಸದ ರಮೇಶ ಕತ್ತಿ ಅವರು ಬುಧವಾರ ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಂತೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಚುನಾವಣೆಯನ್ನು ಎದುರಿಸುತ್ತೇವೆ. ಇಲ್ಲಿಯೂ ನಾವು ಕುದುರೆ ಹೂಡುತ್ತೇವೆ. ಅವರು ಹಿಡಿದು ಕಟ್ಟಿಹಾಕಲಿ ನೋಡೋಣ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರು, ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಅವರು ಕುದುರೆ ಕಟ್ಟಿ ಹಾಕುತ್ತೇನೆ ಎಂದರೆ ಕಟ್ಟಿ ಹಾಕಲಿ. ಅವರಿಗೆ ಬೇಡ ಎಂದವರು ಯಾರು? ನಾವು ಸಹ ಕುದುರೆಯನ್ನು ಹೂಡುವ ಪ್ರಯತ್ನ ಮಾಡುತ್ತೇವೆ. ಅದನ್ನು ಕಟ್ಟಿ ಹಾಕುವ ಪ್ರಯತ್ನ ಅವರು ಮಾಡಲಿ ಎಂದು ತಿರುಗೇಟು ನೀಡಿದರು.