ಬೆಳಗಾವಿ : ಸರಕಾರದ ಆದೇಶದಂತೆ ಜಿಲ್ಲೆ ಸೇರಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕಡ್ಡಾಯ ಕನ್ನಡ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ, ಸರ್ವೋದಯ ಸ್ವಯಂ ಸೇವಾ ಸಂಘ (ಕನ್ನಡಪರ ಸಂಘಟನೆ) ವತಿಯಿಂದ ನಗರದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು,
ಪಾಲಿಕೆಯ ವಿವಿಧ ಬಡಾವಣೆಗಳಲ್ಲಿ ಕನ್ನಡ ಕಡೆಗಣಿಸಲಾದ ಫಲಕಗಳ ಫೋಟೋಗಳನ್ನು ಪ್ರದರ್ಶಿಸಿ, ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ, ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ ಫಲಕಗಳಲ್ಲಿ ಶೇ.60ರ ಕನ್ನಡ ಭಾಷೆ ಕಡ್ಡಾಯ ಪಾಲನೆಯಾಗುತ್ತಿಲ್ಲ ಹಾಗೂ
ಪಾಲಿಕೆಯ ಅಧೀನದ ನಾಮ ಫಲಕಗಳಲ್ಲಿಯೇ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಇದು ಖಂಡನೀಯ ಈ ಕೂಡಲೇ ಪಾಲಿಕೆ ಅಧೀನದ ನಾಮಫಲಕಗಳಲ್ಲಿ ಶೇ.60 ಕನ್ನಡ ಅಳವಡಿಕೆಯಾಗಬೇಕು ಎಂದು ಒತ್ತಾಯಿಸಿದರು.
ಸರಕಾರದ ಆದೇಶದಂತೆ ವ್ಯಾಪಾರಿಗಳು, ಅಂಗಡಿಕಾರರು ಈಗಾಗಲೇ ತಮ್ಮ ಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ, ಪಾಲಿಕೆ ವ್ಯಾಪ್ತಿಯ ರಸ್ತೆ, ಬಡಾವಣೆ, ಉದ್ಯಾನ, ವೃತ್ತ, ಸರಕಾರಿ ಕಚೇರಿಗಳ ಮಾರ್ಗಸೂಚಿ ಫಲಕ, ಪೌರ ಕಾಮಿರ್ಕರ ವಸತಿ ಗೃಹ, ರೈಲ್ವೆ ಮೇಲ್ಸೇತುವೆಗಳ ಫಲಕಗಳಲ್ಲಿ ಮಾತ್ರ ಶೇ.60ರ ಕನ್ನಡ ಕಡ್ಡಾಯ ಪಾಲನೆಯಾಗಿಲ್ಲ. ಇದನ್ನು ಕೂಡಲೇ ಮಹಾನಗರ ಪಾಲಿಕೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶ್ರೀನಿವಾಸ ತಾಳೂಕರ, ಮಲ್ಲಪ್ಪ ಸೊಂಟಕ್ಕಿ, ಪ್ರಕಾಶ ಶಿರೋಳಕರ, ಹನಮಂತ ಬುಚಡಿ, ಆನಂದ ಲೋಕರಿ, ಉದಯ ವಾಗೂಕರ, ಸಿದ್ದಪ್ಪ ಸುಗಂಧಿ, ಬಸವರಾಜ ಕಾಮಕರ, ಗುರುರಾಜ ಕಳ್ಳಿಮನಿ, ರವಿ ತಾವರಿ, ಗಜಾನನ ಬಾವನ್ನವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.