ಬೆಳಗಾವಿ:ಉಗರಗೋಳ ಸಮೀಪದ ಏಳುಕೊಳ್ಳದ ನಾಡು ಯಲ್ಲಮ್ಮಗುಡ್ಡದಲ್ಲಿ ಮಂಗಳವಾರ ಶೀಗಿ ಹುಣ್ಣಿಗೆ ಅಂಗವಾಗಿ ಬೃಹತ್ ಜಾತ್ರೆ ಜರುಗಿತು. ಬೆಳಗ್ಗೆಯಿಂದ ಗುಡ್ಡದತ್ತ ಹರಿದು ಬಂದ ಲಕ್ಷಾಂತರ ಭಕ್ತರು, ಆದಿಶಕ್ತಿ ಶ್ರೀ ರೇಣುಕಾ ದೇವಿಗೆ ತಮ್ಮ ಶಕ್ತಿಗೆಅನುಸಾರ ಪೂಜೆ ಸಲ್ಲಿಸಿ, ವಿಶೇಷ ದರ್ಶನ ಪಡೆದು ಪುನೀತರಾದರು. ಆದರೆ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಭಕ್ತರು ಪರದಾಡಿದರು.
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಭಕ್ತರ ದಂಡು ಯಲ್ಲಮ್ಮನ ಸಾನ್ನಿಧ್ಯದತ್ತ ಮುಖ ಮಾಡಿತ್ತು. ಎತ್ತ ನೋಡಿದರೂ ಜನಜಾತ್ರೆಯೇ ಕಣ್ಣಿಗೆ ರಾಚುತ್ತಿತ್ತು. ಶೀಗಿ ಹುಣ್ಣಿಮೆಯಾದ್ದರಿಂದ ಅಲ್ಲೊಂದು ಗ್ರಾಮೀಣ ಹಳ್ಳಿ ಸೊಗಡಿನ ಜಾತ್ರೆಯೇ ನಡೆದಂತ ಅನುಭವ ಎಲ್ಲರಿಗೂ ಭಾಸವಾಗುತ್ತಿತ್ತು.
ಯಲ್ಲಮ್ಮಗುಡ್ಡದ ಬೆಟ್ಟದ ಪ್ರದೇಶಗಳಲ್ಲಿ ಠಿಕಾಣಿ ಹೂಡಿದ್ದ ಭಕ್ತರು ಮಲಪ್ರಭೆ ಮಡಿಲಲ್ಲಿನ ಜೋಗುಳಬಾವಿ, ಎಣ್ಣೆಹೊಂಡದಲ್ಲಿ ಪವಿತ್ರಸ್ನಾನ ಮಾಡಿ ವಿಶೇಷ ನೈವೇದ್ಯ ತಯಾರಿಸಿ ಪರಡಿ ತುಂಬಿ ಅಮ್ಮನ ಕೃಪೆಗೆ ಪಾತ್ರರಾದರು. ಭಕ್ತರು ಹೋಳಿಗೆ, ಕಡಬು, ವಡೆ, ಭಜಿ ಮೊದಲಾದ ಖಾದ್ಯಗಳನ್ನು ತಯಾರಿಸಿದ್ದರು. ಧಾರ್ಮಿಕ ವಿಧಿವಿಧಾನಗಳ ನಂತರ ಎಲ್ಲರೂ ಒಗ್ಗೂಡಿ ಕುಳಿತು, ದೇವಿಯ ದರ್ಶನ ಪಡೆದು ಶೀಗಿ ಹುಣ್ಣಿಮೆ ಅರ್ಥಪೂರ್ಣವಾಗಿ ಆಚರಿಸಿದರು.
ಶೀಗಿ ಹುಣ್ಣಿಮೆ ಜಾತ್ರೆ ರೈತರ ಜಾತ್ರೆಯಂದೇ ಖ್ಯಾತಿ ಪಡೆದಿದೆ. ಆದರೆ ಈ ಬಾರಿ ಮಳೆ, ಪ್ರವಾಹದಿಂದ ಅಪಾರ ಪ್ರಮಾನದಲ್ಲಿ ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ, ಹಾಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೋ ಅಥವಾ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ರೈತರು ನಿರೀಕ್ಷೆಗೂ ಮೀರಿ ಹರಿದು ಬಂದಿದ್ದರು.
ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಭಕ್ತರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಯಲ್ಲಮ್ಮನ ಗುಡ್ಡದಿಂದ ಉಗರಗೋಳ, ಹಿರೆಕುಂಬಿ, ಚಿಕ್ಕುಂಬಿವರೆಗೆ ವಾಹನಗಳ ಸಾಲು ಕಂಡುಬಂದಿತು. ಸಂಜೆಯಾಗುತ್ತಾ ಬಂದರು ವಾಹನಗಳ ಸಾಲು ಇನ್ನೂ ಹೆಚ್ಚಾಗುತ್ತಲೇ ಸಾಗಿತ್ತು. ಭಕ್ತರು ಹೈರಾಣಾಗಿದ್ದು ಕಂಡು ಬಂದಿತು.