ಪಾಟ್ನಾ : ಕೆಲವೇ ತಿಂಗಳಲ್ಲಿ ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣೆಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಇದೀಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಇಡೀ ದೇಶ ಕಾತರದಿಂದ ಕಾಯುತ್ತಿದೆ. ಈ ನಡುವೆ ಕೆಲ ಸಮೀಕ್ಷೆಗಳು ಈ ಬಾರಿ ಯಾರಿಗೆ ಗೆಲುವು ಎಂಬ ಭವಿಷ್ಯವನ್ನು ನುಡಿಯುತ್ತಿರುವುದು ವಿಶೇಷ.
2025 ರ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ನಾಲ್ಕು ಪ್ರಮುಖ ಒಪಿನಿಯನ್ ಪೋಲ್ಗಳ ಫಲಿತಾಂಶಗಳು ರಾಜ್ಯದ ಮತದಾರರ ಟ್ರೆಂಡ್ ಬಗ್ಗೆ ಹೇಳಿವೆ. ಮ್ಯಾಟ್ರಿಕ್ಸ್, ಜೆವಿಸಿ, ಸ್ಪೀಕ್ ಮೀಡಿಯಾ ನೆಟ್ವರ್ಕ್ ಮತ್ತು ವೋಟ್ ವೈಬ್ ನಡೆಸಿದ ಸಮೀಕ್ಷೆಗಳು ಬಿಜೆಪಿ, ಜೆಡಿಯು, ಎಲ್ಜೆಪಿ (ರಾಮ ವಿಲಾಸ) ಮತ್ತು ಎಚ್ಎಎಂ ಒಳಗೊಂಡ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆಯನ್ನು ತೋರಿಸಿವೆ.
ಸಮೀಕ್ಷೆಗಳ ಪ್ರಕಾರ, ಎನ್ಡಿಎ 40% ರಿಂದ 52% ಮತಗಳನ್ನು ಮತ್ತು 130 ರಿಂದ 158 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಸಮೀಕ್ಷೆ ಈ ಪ್ರಾಜೆಕ್ಷನ್ 2020 ರ ವಿಧಾನಸಭಾ ಚುನಾವಣೆ ಫಲಿತಾಂಶಕ್ಕಿಂತ ಗಮನಾರ್ಹವಾಗಿ ಉತ್ತಮವಾಗಿವೆ, 2020 ರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ 125 ಸ್ಥಾನಗಳನ್ನು ಗೆದ್ದಿತ್ತು.
ಈ ಸಮೀಕ್ಷೆಗಳಲ್ಲಿ ನಿತೀಶಕುಮಾರ ಅವರ ಮೇಲಿನ ಸಾರ್ವಜನಿಕ ನಂಬಿಕೆ ಹಾಗೆಯೇ ಉಳಿದಿರುವುದು ಕಂಡುಬಂದಿದೆ.
ಮ್ಯಾಟ್ರಿಕ್ಸ್ ಸರ್ವೆ ಪ್ರಕಾರ, ಬಿಹಾರದ ಸಾರ್ವಜನಿಕರು ಮುಖ್ಯಮಂತ್ರಿ ನಿತೀಶಕುಮಾರ ಅವರನ್ನು ಸ್ಥಿರತೆ ಮತ್ತು ಉತ್ತಮ ಆಡಳಿತದ ಸಂಕೇತವೆಂದು ಪರಿಗಣಿಸುತ್ತಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 76% ಜನರು ನಿತೀಶಕುಮಾರ ಅವರ ಕೆಲಸದಿಂದ ತೃಪ್ತರಾಗಿರುವುದಾಗಿ ಹೇಳಿದ್ದಾರೆ. ಇವರಲ್ಲಿ 40% ಜನರು ತುಂಬಾ ತೃಪ್ತರಾಗಿದ್ದಾರೆ ಮತ್ತು 36% ಜನರು ತೃಪ್ತರಾಗಿದ್ದಾರೆ. ಬಿಹಾರದಲ್ಲಿ ಉತ್ತಮ ಆಡಳಿತವನ್ನು ಯಾರು ನೀಡಬಹುದು ಎಂದು ಕೇಳಿದಾಗ, 35% ಜನರು ಬಿಜೆಪಿಯನ್ನು ಮತ್ತು 18% ಜನರು ಜೆಡಿಯು ಅನ್ನು ಹೆಸರಿಸಿದ್ದಾರೆ. ಪರಿಣಾಮವಾಗಿ, ಎನ್ಡಿಎ ಒಟ್ಟು 43% ಬೆಂಬಲವನ್ನು ಪಡೆದುಕೊಂಡಿದೆ. ಸರಿಸುಮಾರು 42% ಜನರು ನಿತೀಶಕುಮಾರ ಅವರನ್ನು ಮುಖ್ಯಮಂತ್ರಿಯಾಗಿ ಮತ್ತೆ ಆಯ್ಕೆ ಮಾಡಬೇಕೆಂದು ಬಯಸಿದ್ದಾರೆ. ಈಗ ಚುನಾವಣೆ ನಡೆದರೆ, 52% ಮತದಾರರು ಎನ್ಡಿಎಗೆ ಮತ ಹಾಕುತ್ತಾರೆ. ಇದು ನಿತೀಶಕುಮಾರ ಅವರ ಜನಪ್ರಿಯತೆಯನ್ನು ತೋರಿಸುತ್ತದೆ.
ಎನ್ಡಿಎ 131 ರಿಂದ 150 ಸ್ಥಾನಗಳು
ಜೆವಿಸಿ ಒಪಿನಿಯನ್ ಪೋಲ್ ಪ್ರಕಾರ, ಎನ್ಡಿಎ ಮೈತ್ರಿಕೂಟವು 41 ರಿಂದ 45%ಋಷ್ಟು ಮತಗಳನ್ನು ಮತ್ತು 131 ರಿಂದ 150 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಆರ್ಜೆಡಿ, ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಮಹಾ ಮೈತ್ರಿಕೂಟವು 40% ಮತಗಳನ್ನು ಮತ್ತು 81 ರಿಂದ 103 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಜನ್ ಸೂರಜ್ ಅಭಿಯಾನ್ (ಜನ್ ಸೂರಜ್ ಅಭಿಯಾನ್) 10 ರಿಂದ 11% ಮತಗಳನ್ನು ಮತ್ತು 4 ರಿಂದ 6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಕೇಳಿದಾಗ, 27% ಜನರು ನಿತೀಶಕುಮಾರ ಅವರನ್ನು ಹೆಸರಿಸಿದರೆ, 25% ಜನರು ತೇಜಸ್ವಿ ಯಾದವ್ ಅವರನ್ನು ಬೆಂಬಲಿಸಿದ್ದಾರೆ. ನಿತೀಶಕುಮಾರ ರಾಜ್ಯ ಮಟ್ಟದಲ್ಲಿ ಇನ್ನೂ ಮುನ್ನಡೆಯಲ್ಲಿದ್ದಾರೆ.
ಸ್ಪೀಕ್ ಮೀಡಿಯಾ ನೆಟ್ವರ್ಕ್ ಸಮೀಕ್ಷೆ
ಈ ಸಮೀಕ್ಷೆಯ ಪ್ರಕಾರ, ಎನ್ಡಿಎ 46% ಮತ ಹಂಚಿಕೆಯೊಂದಿಗೆ 158 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆದರೆ ಮಹಾ ಮೈತ್ರಿಕೂಟ 41% ಮತ ಹಂಚಿಕೆಯೊಂದಿಗೆ 66 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಹಾಗೂ ಪ್ರಶಾಂತ ಕಿಶೋರ ಅವರ ಜನ್ ಸೂರಜ್ 8% ಮತಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಏತನ್ಮಧ್ಯೆ, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದ್ ಮುಸ್ಲಿಮೀನ್ (AIMIM) ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ವೋಟ್ ವೈಬ್ ಸಮೀಕ್ಷೆ ಏನು ಹೇಳುತ್ತದೆ…?
ಈ ಸಮೀಕ್ಷೆಯು ಮತದಾನದ ಆದ್ಯತೆಗಳನ್ನು ನೇರವಾಗಿ ನಿರ್ಣಯಿಸುವ ಬದಲು, ಮಹಾಘಟಬಂಧನ್ನ ಮಹಿಳಾ ಉದ್ಯೋಗ ಯೋಜನೆಯ (ಮಹಿಳೆಯರಿಗೆ ₹10,000) ಪರಿಣಾಮದ ಬಗ್ಗೆ ಕೇಳಿದೆ. ಸರಿಸುಮಾರು 34.9% ಪ್ರತಿಕ್ರಿಯಿಸಿದವರು ಮಹಾಘಟಬಂಧನ್ಗೆ ಮತ ಹಾಕುವುದಾಗಿ ಹೇಳಿದ್ದಾರೆ, ಆದರೆ 34.8% ಪ್ರತಿಕ್ರಿಯಿಸಿದವರು ಎನ್ಡಿಎಯನ್ನು ಬೆಂಬಲಿಸಿದ್ದಾರೆ, ಇದು ಬಹುತೇಕ ಸಮನಾದ ಮತಗಳನ್ನು ಸೂಚಿಸುತ್ತದೆ. ಆದಾಗ್ಯೂ, ಈ ಹಿಂದೆ ಮಹಾಘಟಬಂಧನ್ ಅಥವಾ ಜಾನ್ ಸೂರಜ್ಗೆ ಮತ ಹಾಕಿದ 5.8% ಪ್ರತಿಕ್ರಿಯಿಸಿದವರು ಈ ಯೋಜನೆಯ ಕಾರಣದಿಂದಾಗಿ ಎನ್ಡಿಎ (NDA)ಗೆ ಮತ ಹಾಕುವುದಾಗಿ ಹೇಳಿದ್ದಾರೆ, ಇದು ಎನ್ಡಿಎ ಮತ ಹಂಚಿಕೆ ಪ್ರಮಾಣವನ್ನು 40%ಕ್ಕಿಂತ ಹೆಚ್ಚಿಗೆ ತಂದು ನಿಲ್ಲಿಸಿದೆ.
ಒಟ್ಟಾರೆಯಾಗಿ, ನಾಲ್ಕು ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟ 130-158 ಸ್ಥಾನಗಳನ್ನು ಗೆಲ್ಲುವ ಮತ್ತು 40-52% ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ. ಇದು 2020 ರ ಫಲಿತಾಂಶಕ್ಕಿಂತ ಗಮನಾರ್ಹವಾಗಿ ಸುಧಾರಿಸಿದೆ (125 ಸ್ಥಾನಗಳು, 37.26% ಮತ ಪಾಲು ಪಡೆದಿತ್ತು). ಮಹಾಘಟಬಂಧನವು 37-41% ಮತಗಳನ್ನು ಪಡೆಯುವ ಹಾಗೂ 66-103 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಎನ್ಡಿಎ ಮುನ್ನಡೆಗೆ ಪ್ರಮುಖ ಕಾರಣಗಳು
ರಾಜಕೀಯ ವಿಶ್ಲೇಷಕರ ಪ್ರಕಾರ, ಬಿಹಾರದಲ್ಲಿ ಎನ್ಡಿಎ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ, ನಿತೀಶ ಅವರ ಆಡಳಿತಾತ್ಮಕ ಇಮೇಜ್ ಪ್ರಬಲವಾಗಿ ಉಳಿದಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರೂ, ಅವರನ್ನು ಕಾರ್ಯನಿರತ ಮುಖ್ಯಮಂತ್ರಿ ಎಂದು ಪರಿಗಣಿಸಲಾಗುತ್ತದೆ. ಎರಡನೆಯದಾಗಿ, ಎನ್ಡಿಎ ಬಲವಾದ ಸಾಮಾಜಿಕ ಮತ್ತು ಜಾತಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಬಿಜೆಪಿ (BJP) ನಗರ ಮತ್ತು ಅರೆನಗರಗಳಲ್ಲಿ ಮತ್ತು ಮುಂದುವರಿದ ಹಾಗೂ ಹಿಂದುಳಿದ ವರ್ಗಗಳ ಹೆಚ್ಚು ಬೆಂಬಲ ಪಡೆದರೆ ಜೆಡಿಯು (JDU)ಗೆ ಗ್ರಾಮೀಣ ಮತ್ತು ಹಿಂದುಳಿದ ವರ್ಗಳು ಹಾಗೂ ಅತ್ಯಂತ ಹಿಂದುಳಿದ ವರ್ಗಗಳ ಬೆಂಬಲ ಇರುವುದು ಕಂಡುಬಂದಿದೆ. ಹಾಗೂ ಎಲ್ಜೆಪಿ(LJP) ದಲಿತ ಸಮುದಾಯದ ವಿಶ್ವಾಸ ಹೊಂದಿರುವುದು ಕಂಡುಬಂದಿದೆ. ಮೂರನೆಯದಾಗಿ, ಆರ್ಜೆಡಿ ನೇತೃತ್ವದ ಮಹಾ ಘಟಬಂಧನದ ಏಕತೆ ಮತ್ತು ಸಾಂಸ್ಥಿಕ ದೌರ್ಬಲ್ಯದ ಕೊರತೆ ಎನ್ಡಿಎಗೆ ಪ್ರಯೋಜನಕಾರಿ ಪರಿಣಮಿಸುತ್ತಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಪ್ರಭಾವವೂ ಮತದಾರರ ಮೇಲಿದೆ. ಇದು ನಿತೀಶಕುಮಾರ ನೇತೃತ್ವದ ಎನ್ಡಿಗಎಗೆ ಡಬಲ್ ಇಂಜಿನ್ ಸರ್ಕಾರ ಅನುಕೂಲಕರವಾಗುವುದು ಕಂಡುಬಂದಿದೆ.
ನವೆಂಬರ್ 22ಕ್ಕೂ ಮುನ್ನ ಬಿಹಾರ ವಿಧಾನಸಭಾ ಚುನಾವಣೆ: ಜ್ಞಾನೇಶ್ ಕುಮಾರ್ :
ನವೆಂಬರ್ 22ಕ್ಕೂ ಮುನ್ನ ಬಿಹಾರ ವಿಧಾನಸಭಾ ಚುನಾವಣೆಯು ನಡೆಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ 243 ಕ್ಷೇತ್ರಗಳಿವೆ. ಬಿಹಾರದ ಎಲ್ಲಾ ಮತದಾರರು ತಮ್ಮ ಮತ ಚಲಾಯಿಸುವಂತೆ ಮತ್ತು ಛಠ್ ಪೂಜಾ ಹಬ್ಬವನ್ನು ಆಚರಿಸುವಂತೆಯೇ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವಂತೆ ಸಿಇಸಿ ಕುಮಾರ್ ಕರೆ ನೀಡಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾತನಾಡಿ, ಈ ಬಾರಿ ಯಾವುದೇ ಬೂತ್ನಲ್ಲಿ 1,200 ಕ್ಕಿಂತ ಹೆಚ್ಚು ಮತದಾರರ ಹೆಸರು ಇರುವುದಿಲ್ಲ. ಇದು ಮತದಾನಕ್ಕೆ ಅನುಕೂಲವಾಗಲಿದೆ. 2025 ರ ಬಿಹಾರ ಚುನಾವಣೆಯಿಂದ ಪ್ರತಿ ಬೂತ್ ಅನ್ನು 100 ಪರ್ಸೆಂಟ್ ವೆಬ್ಕಾಸ್ಟ್ ಮಾಡಲಾಗುತ್ತದೆ. ಈ ಬಾರಿ, ಬಿಹಾರದಲ್ಲಿ ಮತಗಳನ್ನು ಹೊಸ ವ್ಯವಸ್ಥೆಯನ್ನು ಬಳಸಿಕೊಂಡು ಎಣಿಕೆ ಮಾಡಲಾಗುತ್ತದೆ. ಇವಿಎಂ ಎಣಿಕೆಯಲ್ಲಿ ಹೊಂದಾಣಿಕೆಯಾಗದಿದ್ದರೆ, ಎಲ್ಲಾ ವಿವಿಪ್ಯಾಟ್ಗಳನ್ನು ಎಣಿಕೆ ಮಾಡಲಾಗುತ್ತದೆ. ಅದೇ ರೀತಿ, ಇವಿಎಂ ಎಣಿಕೆಯ ಅಂತಿಮ ಎರಡು ಸುತ್ತಿನ ಮೊದಲು ಅಂಚೆ ಮತಪತ್ರಗಳ ಎಣಿಕೆ ಕಡ್ಡಾಯವಾಗಿರುತ್ತದೆ. ಇದರ ನಂತರವೇ ಇವಿಎಂ ಎಣಿಕೆಯ ಅಂತಿಮ ಎರಡು ಸುತ್ತುಗಳು ಪೂರ್ಣಗೊಳ್ಳುತ್ತವೆ ಎಂದರು.
ಬಿಹಾರದ ಚುನಾವಣಾ ಆಯೋಗವು 17 ಹೊಸ ವಿಧಾನಗಳನ್ನು ಜಾರಿಗೆ ತಂದಿದ್ದು, ರಾಜ್ಯವನ್ನು ರಾಷ್ಟ್ರದ ಹಾದಿಯಲ್ಲಿ ಮುನ್ನಡೆಸಿದೆ. ಭಾರತದಲ್ಲಿ ಚುನಾವಣೆಗಳನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯಿಂದ ನಿಯಂತ್ರಿಸಲಾಗುತ್ತದೆ. ಭಾರತದ ಚುನಾವಣೆಗಳು ಮತ್ತು ಚುನಾವಣಾ ಆಯೋಗವು ವಿಶ್ವದಲ್ಲೇ ಅತಿ ದೊಡ್ಡ ವ್ಯವಸ್ಥೆಯಾಗಿದೆ. 22 ವರ್ಷಗಳ ನಂತರ, ಮತದಾರರ ಪಟ್ಟಿಯನ್ನು ಶುದ್ಧೀಕರಿಸಲಾಯಿತು ಎಂದರು.
ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿದ್ದರೆ, ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮೇಲ್ಮನವಿ ಸಲ್ಲಿಸಿ, ಮತ್ತು ತಪ್ಪು ಕಂಡುಬಂದರೆ, ಸಿಇಒಗೆ ಮೇಲ್ಮನವಿ ಸಲ್ಲಿಸಿ.ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮೊಬೈಲ್ ಫೋನ್ಗಳನ್ನು ಮತಗಟ್ಟೆಯೊಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.