ಬೆಳಗಾವಿ: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸುವುದು ಸರಕಾರದ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದೆ. ಉಳಿದ ಕಡೆಗಳಲ್ಲೂ ಶೀಘ್ರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ, ಗೃಹವೈದ್ಯರ ವಸತಿ ನಿಲಯ ನಿರ್ಮಾಣಕ್ಕೆ ಶಿಲಾನ್ಯಾಸ, ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ನಗರ ಬಸ್ ನಿಲ್ದಾಣ ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಪಿಎಂ-ಉಷಾ(ಮೇರು) ಕಟ್ಟಡ ಕಾಮಗಾರಿಗಳು ಮತ್ತು ಹೆದ್ದಾರಿಯಿಂದ ವಿಶ್ವವಿದ್ಯಾನಿಲಯದ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ(ಅ.4) ಬಿಮ್ಸ್ ಆವರಣದಲ್ಲಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಾರಣಾಂತರಗಳಿಂದ ಕುಂಟುತ್ತ ಸಾಗಿದ್ದ ಬಿಮ್ಸ್ ಆಸ್ಪತ್ರೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇದೀಗ ಆರಂಭಿಸಲಾಗಿದೆ. ಹಂತ ಹಂತವಾಗಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೆ.ಎಲ್.ಇ. ಸಂಸ್ಥೆಯಿಂದ ವೈದ್ಯರನ್ನು ನಿಯೋಜಿಸಿ ಉಚಿತ ಸೇವೆ ಒದಗಿಸಿರುವುದರಿಂದ ಸರಕಾರದ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.
ಬಡವರು, ತಳ ಸಮುದಾಯದ ಜನರಿಗೆ ಹಾಗೂ ಅಸಮಾನತೆ ನಿರ್ಮೂಲನೆ ಮಾಡಲು ಅವಕಾಶ ವಂಚಿತರಿಗೆ ಉತ್ತಮ ಸೌಲಭ್ಯ ಒದಗಿಸುವುದು ಸರಕಾರದ ಆದ್ಯತೆಯಾಗಿದೆ.
ಸಮ ಸಮಾಜ ನಿರ್ಮಾಣಕ್ಕಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಸಮಾಜದ ಕಟ್ಟಕಡೆಯ ಜನರನ್ನು ಸ್ವಾವಲಂಬಿಯಾಗಿಸಬೇಕು ಎಂಬುದಕ್ಕೆ ಶ್ರಮಿಸಿದವರು.
ಅಸಮಾನತೆ ತೊಡೆದು ಹಾಕಲು ಸರಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಬಡವರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವುದು ಸರಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಲಕ್ಷಾಂತರ ಜನರಿಗೆ ನೆರವು ನೀಡಲಾಗುತ್ತಿದ್ದು, ಇಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಿಂದ ಉಚಿತವಾಗಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
ಬೆಳಗಾವಿ ನಗರಕ್ಕೆ ನೂರು ಎಲೆಕ್ಟ್ತಿಕ್ ಬಸ್:
ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಶೀಘ್ರದಲ್ಲಿಯೇ ಒಂದು ನೂರು ಎಲೆಕ್ಟ್ರಿಕ್ ಬಸ್ ಗಳನ್ನು ಬೆಳಗಾವಿ ನಗರಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಿಕ್ಷಣವೇ ಶಕ್ತಿ. ಶಿಕ್ಷಣದಿಂದ ಸ್ವತಂತ್ರರಾಗಲು ಸಾಧ್ಯ. ಆದ್ದರಿಂದ ದಲಿತರು, ಹಿಂದುಳಿದವರು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂಬುದು ಸರಕಾರದ ಆಶಯವಾಗಿದೆ.
ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಬಡವರ ಅನುಕೂಲಕ್ಕಾಗಿ ಹಿಂದಿನ ಸರಕಾರದ ಅವಧಿಯಲ್ಲಿ ಅನೇಕ ಭಾಗ್ಯ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಈ ಬಾರಿ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಸ್ವಾವಲಂಬನೆ ಮತ್ತು ಆರ್ಥಿಕಾಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ.
ಶಕ್ತಿ ಯೋಜನೆಯಡಿ ಇದುವರೆಗೆ 565 ಕೋಟಿ ಮಹಿಳೆಯರು ಶೂನ್ಯ ಮೊತ್ತದ ಟಿಕೆಟ್ ಪಡೆದು ಉಚಿತ ಪ್ರಯಾಣ ಮಾಡಿರುವುದು ದಾಖಲೆಯಾಗಿದೆ. 1.25 ಲಕ್ಷ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತಿದೆ.
ಇದಲ್ಲದೇ ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಮೂಲಕ ಜನರ ಬದುಕು ಉತ್ತಮಪಡಿಸಿ ತನ್ಮೂಲಕ ಸಮಾಜದಲ್ಲಿನ ಅಸಮಾನತೆ ತೊಡೆದುಹಾಕಲು ಶ್ರಮಿಸಲಾಗುತ್ತಿದೆ.
ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರಾಜ್ಯದಲ್ಕಿ ಹತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.
ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ:
ಖುಷ್ಕಿ ಬೆಳೆಹಾನಿ 8.5 ಸಾವಿರ ಪರಿಹಾರದಂತೆ ಹಾಗೂ ಎನ್.ಡಿ.ಆರ್.ಎಫ್. ಮಾರ್ಗಸೂಚಿ 8.5 ಸಾವಿರ ಸೇರಿಸಿ ಒಟ್ಟು 17 ಸಾವಿರ ಪರಿಹಾರ ನೀಡಲಾಗುತ್ತಿದೆ.
ನೀರಾವರಿ ಬೆಳೆಹಾನಿಗೆ 21,500 ರೂಪಾಯಿ ಪರುಹಾರ. ಇನ್ನೂ ಅನೇಕ ಕಡೆ ಮಳೆಯಾಗುತ್ತಿದ್ದು, ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬೆಳಗಾವಿಯ ಬಡ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿದೆ. ಕ್ಯಾನ್ಸರ್ ಆಸ್ಪತ್ರೆಯನ್ನು ಕೂಡ ಬಿಮ್ಸ್ ಆವರಣದಲ್ಲಿಯೇ ಸ್ಥಾಪಿಸಲಾಗುತ್ತಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ವಾಹನ ದಟ್ಟಣೆ ನಿರತವಹಿಸಲು 200 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈ ಓವರ್
ಹುದಲಿಯಲ್ಲಿ ಆರ್.ಓ.ಬಿ
ನಗರದಲ್ಲಿ ಸುಸಜ್ಜಿತ ಕ್ರೀಡಾಂಗಣ
55 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲಾಗುತ್ತಿದೆ. ಒಟ್ಟಾರೆ ನಮ್ಮ ಸರಕಾರವು ಜನಪರ ಕೆಲಸವನ್ನು ಮಾಡುತ್ತಿದೆ.
ಬಡವರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಚಿಕಿತ್ಸೆ ಬಿಮ್ಸ್ ನಲ್ಲಿ ಲಭಿಸಲಿದೆ. ವೈದ್ಯರು ಮತ್ತು ಸಿಬ್ಬಂದಿಯನ್ನು ಹಂತ ಹಂತವಾಗಿ ನೇಮಕ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬೆಳಗಾವಿಯ ಹಿರಿಮೆಗೆ ಮತ್ತೊಂದು ಗರಿಯಾಗಿದೆ. 2013 ರ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮುಖ್ಯಮಂತ್ರಿಯವರು ಮಾಡಿದ್ದಾರೆ. 2023 ರಲ್ಲಿ ಅಧಿಕಾರಕ್ಕೆ ಬಂದ ಪಂಚ ಗ್ಯಾರಂಟಿ ಅನುಷ್ಠಾನದ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬಡವರಿಗೆ ಉತ್ತಮ ಚಿಕಿತ್ಸೆ ನೀಡಲು ಸ್ಥಾಪಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕು.
ಸರಕಾರಿ ಸಂಸ್ಥೆಗಳಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಎಲ್ಲ ಸರಕಾರಿ ಆಸ್ತಿಗಳ ರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ವಿಶ್ವವಿದ್ಯಾಲಯದ ನೂತನ ಕಟ್ಟಡವನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಮಾತನಾಡಿ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬಡವರ ಕಾಮಧೇನು. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುವುದು ಬಡವರಿಗೆ ಸಾಧ್ಯವಿಲ್ಲ; ಆದ್ದರಿಂದ ಅವರಿಗಾಗಿ ಸೂಪರ್ ಸ್ಪೆಷಾಲಿಟಿ ಸ್ಥಾಪಿಸಲಾಗಿದೆ ಎಂದರು.
ಕೆ.ಎಲ್.ಇ. ಸಂಸ್ಥೆಯು 20 ವೈದ್ಯರನ್ನು ಸರದಿಯಂತೆ ನಿಯೋಜಿಸುವ ಮೂಲಕ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜತೆಗೆ ಕೈಜೋಡಿಸಿದೆ.
50 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಮ್ಸ್ ಆಸ್ಪತ್ರೆ ಆವರಣದಲ್ಲಿಯೇ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವುದು.
ಪ್ರತಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಗುರಿಯನ್ನು ಹೊಂದಲಾಗಿತ್ತು. ಇದುವರೆಗೆ 22 ಸರಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ರಾಜ್ಯದಲ್ಲಿ ಇನ್ನೆರಡು ಕಾಲೇಜು ಆರಂಭಿಸುವ ಮೂಲಕ ಬಡವರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಜನರಿಗೆ ಗುಣಮಟ್ಟದ ಚಿಕಿತ್ಸೆ ಕೂಡ ಇದರಿಂದ ಲಭಿಸಲಿದೆ.
ಇಡೀ ದೇಶದಲ್ಲಿ ಅತೀ ಹೆಚ್ಚು ವೈದ್ಯಕೀಯ ಸೀಟುಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಕರ್ನಾಟಕ ರಾಜ್ಯ ಹೊಂದಿದೆ.
ಮುಂದಿನ ಐದು ವರ್ಷಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪ್ರತಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ಟ್ರಾಮಾ ಕೇಂದ್ರಗಳನ್ನು ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ ತಿಳಿಸಿದರು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮಾತನಾಡಿ, ಸರಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಡಿ ಇದುವರೆಗೆ 565 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುತ್ತಾರೆ ಎಂದು ಹೇಳಿದರು.
ಇದಕ್ಕಾಗಿ ಸರಕಾರವು ಒಟ್ಟು
14,456 ಕೋಟಿ ರೂಪಾಯಿ ಖರ್ಚು ಮಾಡಿದೆ.
ಶಕ್ತಿ ಯೋಜನೆ ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಸುಧಾರಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಮಾಜಿಕ ಹಾಗೂ ಬಡವರ ಪರ ಕಾಳಜಿಗೆ ಈ ಯೋಜನೆಗಳು ಸಾಕ್ಷಿಯಾಗಿವೆ.
ನಮ್ಮ ಸರಕಾರದ ಅವಧಿಯಲ್ಲಿಯೇ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ಆರಂಭಿಸಲಾಗಿತ್ತು. ನಂತರ ನಮ್ಮ ಅವಧಿಯಲ್ಲಿಯೇ ಲೋಕಾರ್ಪಣೆಗೊಳಿಸಲಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ರಾಣಿ ಚನ್ನಮ್ಮ ವಿ. ಕಟ್ಟಡ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ. ಪಿಎಂ-ಉಷಾ(ಮೇರು) ಯೋಜನೆಯಡಿ ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗಾಗಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ 9 ಕೋಟಿ ರೂಪಾಯಿ ವೆಚ್ಚದಲ್ಲಿ ಹೆದ್ದಾರಿಯಿಂದ ರಾಣಿ ಚೆನ್ನಮ್ಮ ವಿವಿಗೆ ಸಂಪರ್ಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ವಿವಿಧ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿರುವ ಉನ್ನತ ಶಿಕ್ಷಣ ಇಲಾಖೆಯು ಸಂಶೋಧನೆ ಹಾಗೂ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳನ್ನು ಆರಂಭಿಸುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ.
ತಾಂತ್ರಿಕ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 2500 ಕೋಟಿ ರೂಪಾಯಿ ವೆಚ್ಚದಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸರಕಾರ ಒಪ್ಪಿಗೆ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್ ಅವರು, ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರತಿದಿನ 2500 ಕ್ಕೂ ಅಧಿಕ ಜನರು ಓ.ಪಿ.ಡಿ. ವಿಭಾಗದಿಂದ ಚಿಕಿತ್ಸೆ ಪಡೆಯುತ್ತಾರೆ.
ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರು ಇಪ್ಪತ್ತು ವೈದ್ಯರನ್ನು ಬಿಮ್ಸ್ ಗೆ ಉಚಿತವಾಗಿ ನಿಯೋಜಿಸುವ ಮೂಲಕ ಬಡವರ ಚಿಕಿತ್ಸೆಗಾಗಿ ಸರಕಾರದೊಂದಿಗೆ ಕೈಜೋಡಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಬೆಳಗಾವಿಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಗೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಸ್ವಾವಲಂಬಿ ಜೀವನಕ್ಕೆ ನೆವಾಗುವುದರ ಜತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಸರಕಾರ ಸಾಕಷ್ಟು ಅನುದಾನ ನೀಡುತ್ತಿದೆ ಎಂದು ಹೇಳಿದರು.
ವಿಧಾನಸಭೆಯ ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಭರಮಗೌಡ ಕಾಗೆ, ಶಾಸಕ ಬಾಬಾಸಾಹೇಬ್ ಪಾಟೀಲ, ವಿಧಾನಪರಿಷತ್ತಿನ ಸದಸ್ಯ ನಾಗರಾಜ ಯಾದವ, ಚನ್ನರಾಜ್ ಹಟ್ಟಿಹೊಳಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಮತ್ತಿತರರು ಉಪಸ್ಥಿತರಿದ್ದರು.