ಜನಜೀವಾಳ ವಿಶೇಷ ಬೆಳಗಾವಿ :
ಕರ್ನಾಟಕ ವಿಧಾನ ಮಂಡಲದ ವಿಶೇಷ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವುದರಿಂದ ಬಸವರಾಜ ಬೊಮ್ಮಾಯಿ ನೇತ್ರತ್ವದ ಬಿಜೆಪಿ ಸರಕಾರಕ್ಕೆ
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಕೊನೆಯದು ಎನ್ನಬಹುದು. ಮುಂದಿನ ಅಧಿವೇಶನ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೊಮ್ಮಾಯಿ ಸರಕಾರದ ಪಾಲಿಗೆ ಬೆಳಗಾವಿ ಅಧಿವೇಶನ ಅತ್ಯಂತ ನಿರ್ಣಾಯಕವಾಗಿದೆ.
ಉತ್ತರ ಕರ್ನಾಟಕದ ಜನರ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನ ಅತ್ಯಂತ ಅರ್ಥಪೂರ್ಣವಾಗಿ ನಡೆಯಲಿ ಎನ್ನುವುದು ಈ ಭಾಗದ ಜನರ ಆಶಯವಾಗಿದೆ. ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಿಗೆ ಅಧಿವೇಶನ ಸ್ಪಂದಿಸಬೇಕು ಎನ್ನುವುದು ಜನತೆಯ ಆಗ್ರಹವಾಗಿದೆ. ಸೋಮವಾರದಿಂದ ಆರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಇದೀಗ ಇಡೀ ಸರ್ಕಾರವೇ ಬೆಳಗಾವಿಗೆ ಬಂದಿಳಿದಿದೆ. ಬೆಂಗಳೂರಿನಿಂದ ವಿಧಾನಮಂಡಲದ ಸರ್ವ ಕಚೇರಿಗಳು ಇದೀಗ ಸುವರ್ಣ ವಿಧಾನಸೌಧದಲ್ಲಿ ಪ್ರತಿಷ್ಠಾಪನೆಗೊಂಡಿವೆ. ಡಿಸೆಂಬರ್ ತಿಂಗಳ 30 ನೇ ತಾರೀಕಿನವರೆಗೆ ವಿಧಾನ ಮಂಡಲದ ವಿಶೇಷ ಅಧಿವೇಶನ ನಡೆಯುವ ಕಾರಣಕ್ಕೆ ಬೆಳಗಾವಿಗೆ ಇದೀಗ ವಿಶೇಷ ಮಹತ್ವ ಬಂದಿದೆ. ಇನ್ನೂ 15 ದಿನಗಳ ಕಾಲ ಮುಖ್ಯಮಂತ್ರಿಯಾದಿಯಾಗಿ ಸಚಿವರ ದಂಡೇ ಬೆಳಗಾವಿಯಲ್ಲಿ ಇರುವುದರಿಂದ ಎರಡನೇ ರಾಜಧಾನಿಯಾಗಿರುವ ಈ ಕುಂದಾನಗರಿ ನಾಡಿನ ಗಮನ ಸೆಳೆಯಲಿದೆ.
ಬೊಮ್ಮಾಯಿ ಸರಕಾರದ ಪಾಲಿಗೆ ಅತ್ಯಂತ ಮಹತ್ವದ ಅಧಿವೇಶನ ಆಗಲಿರುವ ಹಿನ್ನೆಲೆಯಲ್ಲಿ ಈ ಬಾರಿಯ ಅಧಿವೇಶನಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಬೆಳಗಾವಿ ಅಧಿವೇಶನದಲ್ಲಿ ಬೊಮ್ಮಾಯಿ ಸರಕಾರ ಮಹತ್ವದ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ವಿಧಾನ ಪರಿಷತ್ ಸಭಾಪತಿ ಆಯ್ಕೆ ಸೇರಿದಂತೆ ಹಲವು ಬೆಳವಣಿಗೆಗಳಿಗೆ ಈ ಬಾರಿಯ ಅಧಿವೇಶನ ಸಾಕ್ಷಿ ಆಗುವ ಸಾಧ್ಯತೆಗಳಿವೆ.
ಒಟ್ಟಾರೆ, ಬೆಳಗಾವಿ ಅಧಿವೇಶನ ಹಿನ್ನೆಲೆಯಲ್ಲಿ ಇನ್ನು 15 ದಿನಗಳ ಕಾಲ ಇಡೀ ಸರ್ಕಾರವೇ ಬೆಳಗಾವಿಯಲ್ಲಿ ನೆಲೆಯಾಗಲಿದ್ದು ಕುಂದನಗರಿಗೆ ರಾಜ ಕಳೆ ಬಂದಿದೆ. ರಸ್ತೆಗಳು ಸಂಪೂರ್ಣ ಡಾಂಬರೀಕರಣ ಗೊಳ್ಳುವತ್ತ ಸಾಗಿದ್ದು ಕಂಡು ಬಂದಿದೆ. ಮಂತ್ರಿ- ಮಹೋದಯರು ಸಂಚರಿಸುವ ರಸ್ತೆಗಳು ಹೊಸ ರೂಪ ಪಡೆದುಕೊಂಡಿವೆ. ಸಚಿವರು, ಶಾಸಕರು ಉಳಿದುಕೊಳ್ಳುವ ತಾಣಗಳು ಇದೀಗ ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡಿವೆ. ಒಟ್ಟಾರೆ ಬೆಳಗಾವಿ ಮಹಾನಗರ ಎರಡು ವಾರಗಳ ಕಾಲ ಅಧಿವೇಶನದ ನೆಪದಲ್ಲಿ ರಾಜ್ಯದ ಗಮನ ಸೆಳೆಯಲಿದೆ.