ಬೆಳಗಾವಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಮ್ಮನ್ನು ನಿಯೋಜನೆ ಮಾಡಿರುವ ಬಗ್ಗೆ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ಸರಕಾರಿ ಅನುದಾನಿತ ಪ್ರೌಢ ಶಾಲೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗೆ ಸಮೀಕ್ಷೆ ಬಗ್ಗೆ ಕೆಪಿಟಿಸಿಎಲ್ ಭವನದಲ್ಲಿ ಸೋಮವಾರದಂದು ತರಬೇತಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ಕುರಿತು ನಮಗೆ ಮೊದಲೇ ಮಾಹಿತಿ ಕೊಟ್ಟಿಲ್ಲ ಈಗ ಏಕಾಏಕಿ ತರಬೇತಿ ನೀಡಿ ಮಂಗಳವಾರದಿಂದಲೇ ಸಮೀಕ್ಷೆ ಮಾಡುವಂತೆ ಒತ್ತಡ ಹೇರುವುದು ಸರಿಯಲ್ಲ. ಸಮೀಕ್ಷೆ ಬಗ್ಗೆ ಮೊದಲೇ ತಿಳಿಸಿದ್ದರೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಯಾವುದೇ ಮಾಹಿತಿ ನೀಡದೆ ಪ್ರೌಢಶಾಲೆಯ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಿರುವುದು ಸರಿಯಲ್ಲ ಎಂದು ಶಿಕ್ಷಕರು ಹಾಗೂ ಸಿಬ್ಬಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರಿಗೆ ಕಿರಿಕಿರಿ ತಂದ ಸಾಮಾಜಿಕ ಗಣತಿ ಕಾರ್ಯ : ವಿನಾಯಿತಿ ಕೊಡಲೇ ಬೇಕಿದ್ದರೂ ಮತ್ತೆ ನೇಮಕ ಮಾಡಿದ ಆಡಳಿತ:
ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಗೆ ಅನುದಾನಿತ ಪ್ರೌಢಶಾಲೆಯ ಶಿಕ್ಷಕರಿಗೆ ಗಣತಿ ಕಾರ್ಯಕ್ಕೆ ನಿಯೋಜಿಸುವ ಯಾದಿಯಲ್ಲಿ ಹೆಸರುಗಳು ಬಂದಿರುತ್ತದೆ. ಆದರೆ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ರಜಾ ಅವಧಿಯಲ್ಲಿ ವಿಶೇಷ ತರಗತಿಗಳನ್ನು ಮಾಡಲು ಧಾರವಾಡ ಆಯುಕ್ತರ ಕಾರ್ಯಾಲಯ ಸೂಚಿಸಿರುವುದರಿಂದ, ಆಯಾ ಶಾಲೆಯ ಆಡಳಿತ ಮಂಡಳಿಯವರ ಆದೇಶವಿರುವುದರಿಂದ ಹಾಗೂ ಶಾಲೆಯ ಫಲಿತಾಂಶ ಕಡಿಮೆ ಬಂದಿರುವ ಪಟ್ಟಿಯಲ್ಲಿ ಇರುವುದರಿಂದ ಪ್ರೌಢಶಾಲೆ ಶಿಕ್ಷಕರು ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಉತ್ತಮ ಫಲಿತಾಂಶ ಕೊಟ್ಟ ಶಾಲಾ ಶಿಕ್ಷಕರಿಗೆ ಈ ಆದೇಶ ಕಿರಿಕಿರಿ ಉಂಟು ಮಾಡಿದೆ. ಮತ್ತು 9 ಮತ್ತು 10 ನೇ ತರಗತಿ ಶಿಕ್ಷಕರನ್ನು ಹೊರತುಪಡಿಸಿ ಇನ್ನುಳಿದ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜಿಸಬೇಕೆಂಬ ಜಿಲ್ಲಾಧಿಕಾರಿಗಳವರ ಆದೇಶವಿರುವುದರಿಂದ ಸದರಿ ಗಣತಿ ಕಾರ್ಯದಿಂದ ನಮ್ಮ ಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡಬೇಕಿದ್ದರೂ ಮತ್ತೆ ನೇಮಿಸಿದ್ದಾರೆ. ಎಸ್ ಎಸ್ ಎಲ್ ಸಿ ಫಾರ್ಮ್ ತುಂಬುವಿಕೆ, ಎನ್ ಎನ್ ಎಂಎಸ್ , ಎಲ್ ಬಿಎ ಕಾರ್ಯ ಮುಂತಾದ ಹೊರೆಯ ನಡುವೆ ಈ ಆದೇಶ ನೋಡಿ ಶಿಕ್ಷಕರ ಹೃದಯ ನಿಂತು ಹೋಗುವ ಕ್ಷಣ ಎದುರಾಗಿದೆ.