ಬೆಳಗಾವಿ : ಭಾರೀ ಕುತೂಹಲ ಮೂಡಿಸಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ನೇತೃತ್ವದ ಪ್ಯಾನೆಲ್ ನಿಂದ ಸ್ಫರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿರೋಧಿ ಪ್ಯಾನೆಲ್ ಗಳು ಧೂಳಿಪಟವಾಗಿವೆ.
ಭಾನುವಾರ ನಡೆದ ಮತದಾನದಲ್ಲಿ ಶೇ.49.45 ಶಾಂತಿಯುತವಾಗಿ ಮತದಾನವಾಗಿತ್ತು. ಸಂಜೆ 5.30ಕ್ಕೆ ಮತದಾನ ಪೂರ್ಣಗೊಂಡಿತ್ತು. 15 ನಿರ್ದೇಶಕ ಸ್ಥಾನಗಳಿಗೆ ಒಟ್ಟು 44 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. 34 ಮತಗಟ್ಟೆಗಳ 16,903 ಮತದಾರರಲ್ಲಿ 8,359 ರೈತರು ಮತಾಧಿಕಾರ ಚಲಾಯಿಸಿದ್ದಾರೆ. ತಡರಾತ್ರಿವರೆಗೂ ಮತ ಎಣಿಕೆ ನಡೆದಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಫಲಿತಾಂಶಕ್ಕಾಗಿ ಮತಕೇಂದ್ರದ ಎದುರು ಕಾರಿನಲ್ಲಿ ಕಾಯ್ದು ಕುಳಿತಿರುವುದು ಕಂಡುಬಂದಿತು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರೈತರು ನಮ್ಮ ಮೇಲೆ ವಿಶ್ವಾಸವಿಟ್ಟು ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಎಲ್ಲ ಕಾರ್ಮಿಕರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ವಿಶ್ವಾಸಕ್ಕೆ ತಕ್ಕಂತೆ ಆಡಳಿತ ನಡೆಸುತ್ತೇವೆ ಎಂದರು.
ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಖಚಿತ. ಎಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.
ಯಾರಿಗೆ ಎಷ್ಟು ಮತ..?
ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ರೈತರ ಪೆನಲ್ ನಡಿ ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿದ್ದ ಚನ್ನರಾಜ ಬಸವರಾಜ ಹಟ್ಟಿಹೊಳಿ(4731), ಶ್ರೀಕಾಂತ ನಾಗಪ್ಪ ಇಟಗಿ(4424), ಶಿವನಗೌಡ ದೊಡಗೌಡ ಪಾಟೀಲ(4349), ಶಂಕರ ಪರಪ್ಪ ಕಿಲ್ಲೇದಾರ(4245), ಶ್ರೀಶೈಲ ಬಸಪ್ಪ ತುರಮರಿ(4183), ಶಿವಪುತ್ರಪ್ಪ ಬಸವಣ್ಣೆಪ್ಪ ಮರಡಿ(3838), ರಘು ಚಂದ್ರಶೇಖರ ಪಾಟೀಲ(3829), ರಾಮನಗೌಡ ಸಣಗೌಡ ಪಾಟೀಲ(3735), ಸುರೇಶ ಯಲ್ಲಪ್ಪ ಹುಲಿಕಟ್ಟಿ(3668), ಪ್ರವರ್ಗ-ಅ ಮತಕ್ಷೇತ್ರದಿಂದ ಫಕ್ಕೀರಪ್ಪ ಫಕ್ಕೀರಪ್ಪ ಸಕ್ರೆಣ್ಣವರ(4142), ಪ್ರವರ್ಗ-ಬ ಮತಕ್ಷೇತ್ರದಿಂದ ಶಂಕರೆಪ್ಪ ಸದಪ್ಪ ಹೊಳಿ(4507), ಮಹಿಳಾ ಮತಕ್ಷೇತ್ರದಿಂದ ಲಲಿತಾ ಬಾಲಚಂದ್ರ ಪಾಟೀಲ(4041), ಸುನಿತಾ ಮಹಾಂತೇಶ ಲಂಗೋಟಿ(3913), ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಬಾಳಪ್ಪ ದುರಗಪ್ಪ ಪೂಜಾರ(3827) ಹಾಗೂ ಪರಿಶಿಷ್ಟ ಪಂಗಡ ಮತಕ್ಷೇತ್ರದಿಂದ ಭರಮಪ್ಪ ಕಲ್ಲಪ್ಪ ಶಿಗೇಹಳ್ಳಿ (4161) ಮತಗಳನ್ನು ಪಡೆದು ಜಯಶಾಲಿಗಳಾಗಿ ಆಯ್ಕೆಯಾಗಿದ್ದಾರೆ.
ಕಾರ್ಖಾನೆ ಗುರುತಿನ ಚೀಟಿ ಜತೆಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಕಲ್ಪಿಸಿದ್ದರಿಂದ ಈ ಸಲ ಮತದಾನಕ್ಕೆ ಮತ್ತಷ್ಟು ಅನುಕೂಲವಾಯಿತು.
ಕಾರ್ಖಾನೆ ಅಧಿಕಾರಿಗಳು ಸಿಬ್ಬಂದಿ ಮೂಲಕ ಗುರುತಿನ ಚೀಟಿ ಮರೆತು ಬಂದ ಮತದಾರರಿಗೆ ಷೇರು ಸಂಖ್ಯೆ ಹುಡುಕಿಕೊಡಲು ನೆರವಾದರು. ಅಂಗವಿಕಲರು, ವೃದ್ಧರನ್ನು ಮತದಾನಕ್ಕೆ ಕರೆತಂದಿದ್ದು ವಿಶೇಷವಾಗಿತ್ತು. ಶುಕ್ರವಾರ ಮತ್ತು ಶನಿವಾರ ಎಡಬಿಡದೆ ಸುರಿದ ಮಳೆ ಭಾನುವಾರ ವಿರಾಮ ನೀಡಿದ್ದರಿಂದ ಮತದಾನ ಸುಸೂತ್ರವಾಗಿ ನಡೆಯಿತು. ವೈದ್ಯಕೀಯ ಸೇವೆ, ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಸೇರಿ ಎಲ್ಲ ಸಿದ್ಧತೆ ಮಾಡಲಾಗಿತ್ತು.
ಕಾರ್ಖಾನೆ ಮಾಜಿ ಅಧ್ಯಕ್ಷ ನಾಸಿರ್ ಬಾಗವಾನರ ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ ಪೆನಲ್ ಮತ್ತು ರೈತಸಂಘದ ಮುಖಂಡ ಬಸವರಾಜ ಮೊಕಾಶಿ ನೇತೃತ್ವದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವದ್ಧಿ ಪೆನಲ್ ಸ್ಪರ್ಧೆಗಿಳಿದಿದ್ದರಿಂದ ಚುನಾವಣೆ ಪೈಪೋಟಿಯಿಂದ ಕೂಡಿತ್ತು. ಚುನಾವಣಾಧಿಕಾರಿಯಾಗಿ ಪ್ರಭಾವತಿ ಫಕೀರಪುರ ಕರ್ತವ್ಯ ನಿರ್ವಹಿಸಿದ್ದರು.