ಬೆಳಗಾವಿ: ದಿವಂಗತ ಉಮೇಶ ಕತ್ತಿ ಒಂದು ಕಾಲಕ್ಕೆ ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿ ಬೆಳೆದಿದ್ದರು. ಆದರೆ ಅವರ ನಂತರ ಕತ್ತಿ ಕುಟುಂಬದ ಹಿಡಿತ ಕಡಿಮೆಯಾಗುತ್ತಿದೆ ಎಂಬ ಭಾವನೆ ವ್ಯಕ್ತವಾಗಿತ್ತು. ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣವಾಗಿದ್ದವು. ಅಷ್ಟರಲ್ಲಿ ಮತ್ತೆ ಎದುರಾದ ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆ ರಮೇಶ ಕತ್ತಿ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿ ಪರಿಣಮಿಸಿತ್ತು. ಆ ಚುನಾವಣೆಯನ್ನು ಅವರು ಸವಾಲಾಗಿ ಸ್ವೀಕಾರ ಮಾಡಿದ್ದರು.
ಪ್ರಭಾವಿ ಜನನಾಯಕ, ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರ ಬಾಣದ ಎದುರು ರಮೇಶ ಕತ್ತಿ ಹಾಗೂ ಎ.ಬಿ. ಪಾಟೀಲ ಬಣ ಇದೀಗ ಗೆದ್ದು ಪಾರಮ್ಯ ಸಾಧಿಸಿರುವುದು ರಾಜ್ಯದ ಗಮನ ಸೆಳೆದಿದೆ.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಬಣಕ್ಕೆ ಭರ್ಜರಿ ಗೆಲುವು ದೊರೆಕಿದೆ. ಸತೀಶ ಜಾರಕಿಹೊಳಿ ಸಹೋದರರು ಹಾಗೂ ಅಣ್ಣಾಸಾಹೇಬ ಜೊಲ್ಲೆ ಕುಟುಂಬಕ್ಕೆ ಬಹು ದೊಡ್ಡ ಸೋಲುಂಟಾಗಿದೆ.
ಒಟ್ಟು 15 ಜನ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಈ ಮಹತ್ವದ ಚುನಾವಣೆಯಲ್ಲಿ ಎಲ್ಲ 15 ಕ್ಷೇತ್ರಗಳನ್ನು ಕತ್ತಿ ಬಣ ಗೆದ್ದಿದೆ.
ದಶಕಗಳಿಂದ ತಮ್ಮ ಹಿಡಿತದಲ್ಲಿ ಇದ್ದ ಈ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಕೈತಪ್ಪಿ ಹೋಗಬಾರದು ಎಂದು ರಮೇಶ ಕತ್ತಿ ತಮ್ಮ ಬದ್ಧ ಎದುರಾಳಿ ಹಾಗೂ ಮಾಜಿ ಸಚಿವ ಎ.ಬಿ. ಪಾಟೀಲ ಅವರ ಜೊತೆ ಕೈಜೋಡಿಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು. ಅದು ಸಹ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ.
ನಸುಕಿನ 3 ಗಂಟೆ ಸುಮಾರಿಗೆ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಕುಟುಂಬದ ಮಧ್ಯೆ ಜಿದ್ದಾಜಿದ್ದಿಯ ಚುನಾವಣೆ ಇದಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಈ ಚುನಾವಣೆ ನಡೆದಿತ್ತು.ಚುನಾವಣೆಯ ಮಾಸ್ಟರ್ ಮೈಂಡ್ ಆಗಿದ್ದ ಸಚಿವ ಸತೀಶ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಓಡಾಡಿದ್ದರು. ಮಾತ್ರವಲ್ಲದೆ ಹುಕ್ಕೇರಿ ತಾಲೂಕಿನ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಭರ್ಜರಿ ಅನುದಾನವನ್ನು ಸಹಾ ಘೋಷಣೆ ಮಾಡಿದ್ದರು.
ಕಳೆದ ಒಂದು ತಿಂಗಳಿನಿಂದ ಹುಕ್ಕೇರಿಯಲ್ಲೇ ಬೀಡು ಬಿಟ್ಟು ಕತ್ತಿ ಕುಟುಂಬದ ವಿರುದ್ದ ಜಾರಕಿಹೊಳಿ ಕುಟುಂಬ ಭರ್ಜರಿ ಪ್ರಚಾರ ನಡೆಸಿತ್ತು.
ಕತ್ತಿ ಪರ ಪೆನೆಲ್ ಗೆ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ರಮೇಶ ಕತ್ತಿ ಬೆಂಬಲಿಗರಿಂದ ಸಂಭ್ರಮಾಚರಣೆ ವೇಳೆ ಸತೀಶ ಜಾರಕಿಹೊಳಿ ಬೆಂಬಗಲಿಗರು ಪ್ರಯಾಣಿಸುತ್ತಿದ್ದ ಕಾರಿಗೆ ಕಲ್ಲು ಎಸೆಯಲಾಗಿದೆ.
ಕಲ್ಲು ತೂರಿ ಕೈಯಿಂದ ಕಾರಿಗೆ ಗುದ್ದಿ ಹುಚ್ಚಾಟ ಮೆರೆದಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ. ಕೂಡಲೇ ಬೆಂಬಲಿಗರನ್ನು ಪೊಲೀಸರು ಚದುರಿಸಿದರು.
ಆಯ್ಕೆಯಾದ ಅಭ್ಯರ್ಥಿಗಳು:
ಕತ್ತಿ ಬೆಂಬಲಿತ ಸ್ವಾಭಿಮಾನಿ ಪೆನಲ್ ಅಭ್ಯರ್ಥಿಗಳಾಗಿದ್ದ ಸನ್ನಾಯಿಕ ಶ್ರೀಮಂತ ಗಂಗಪ್ಪ (ಪರಿಶಿಷ್ಟ ಜಾತಿ), ಲಂಕೆಪ್ಪಗೋಳ ಬಸವಣ್ಣಿ ಸಣ್ಣಪ್ಪ( ಪರಿಶಿಷ್ಟ ಪಂಗಡ), ಗಜಾನನ ಕೊಳ್ಳಿ ( ಹಿಂದುಳಿದ ವರ್ಗದ ಅ), ಸತ್ಯಪ್ಪ ನಾಯಿಕ ( ಹಿಂದುಳಿದ ಬ), ನಾಯಿಕವಾಡಿ ಮಹಬೂಬಿ ಗೌಸ ಆಜಂ, ಮೂಡಲಗಿ ಮಂಗಲ ಗುರುಸಿದ್ದಪ್ಪಾ (ಮಹಿಳಾ ಮೀಸಲು), ಸಾಮಾನ್ಯ ಕ್ಷೇತ್ರದಿಂದ ಕತ್ತಿ ಲವ ರಮೇಶ, ಕಲಗೌಡ ಪಾಟೀಲ, ವಿನಯ ಪಾಟೀಲ, ಮಹಾವೀರ ನಿಲಜಗಿ, ಶಿವಾನಂದ ಮುಡಶಿ, ಮಹಾದೇವ ಕ್ಷೀರಸಾಗರ, ಮದವಾಲ ಶಿವನಗೌಡ ಸತ್ಯಪ್ಪ, ಮುನ್ನೋಳಿ ಲಕ್ಷ್ಮಣ ಬಸವರಾಜ, ವಾಸೇದಾರ ಕೆಂಪಣ್ಣಾ ಸಾತಪ್ಪ ಜಯ ಸಾಧಿಸಿದ್ದಾರೆ.
ರವಿವಾರ ನಡೆದ ಮತದಾನದ ವೇಳೆ ಸಣ್ಣ-ಪುಟ್ಟ ಗಲಾಟೆ, ಗದ್ದಲ ನಡುವೆ ಶೇ.67.54 ಮತದಾನವಾಗಿತ್ತು. 41,050 ಮತದಾರರು ಮತದಾನ ಮಾಡಿದರು. 15 ನಿರ್ದೇಶಕರ ಸ್ಥಾನಕ್ಕೆ ಒಟ್ಟು 32 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಂಘದ 97,841 ಸದಸ್ಯರ ಪೈಕಿ 60,046 ಜನ ಮತದಾನಕ್ಕೆ ಅರ್ಹರಾಗಿದ್ದರು. 122 ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಿತು. ರಾತ್ರಿ 3 ಗಂಟೆವರೆಗೂ ಮತ ಎಣಿಕೆ ನಡೆದಿದ್ದು, ಕುತೂಹಲ ಕೆರಳಿಸಿತ್ತು.