ಸುದ್ದಿ ಎಂಬುದು ಪತ್ರಿಕೆಗಳಲ್ಲಿ ಜೀವಾಳ. ಸುದ್ದಿ ಇದ್ದರೇನೇ ಪತ್ರಿಕೆ. ಆದರೆ ಯಾವದು ಸುದ್ದಿ, ಯಾವದು ಅಲ್ಲ ಎಂಬುದನ್ನು ತೀರ್ಮಾನಿಸುವವರು ಸುದ್ಧಿಗಾರರು ಹಾಗೂ
ಸಂಪಾದಕರು. ಸುದ್ದಿಯನ್ನು ಹೆಕ್ಕಿ ತೆಗೆದು ಸಂಪಾದಕರಿಗೆ ತಲುಪಿಸುವ ಕೆಲಸ ಮಾತ್ರ ಸುದ್ದಿಗಾರನಾದು. ಮುಂದೆ ಅದರ ಹಣೆಬರಹವನ್ನು ನಿರ್ಧರಿಸುವವರು ಸುದ್ದಿ ಸಂಪಾದಕರು ಹಾಗೂ ಸಂಪಾದಕರು.
ಆದರೆ ಕಳೆದ ನಾಲ್ಕು ದಶಕಗಳ ನನ್ನ ಪತ್ರಿಕಾ ರಂಗದ ( ನಾನು ಸಕ್ರಿಯ ಪತ್ರಿಕೋದ್ಯಮವನ್ನು ಬಿಟ್ಟೆ 33 ವರ್ಷಗಳಾದವು ) ಅನುಭವದ ಹಿನ್ನೆಲೆಯನ್ನು ಹೇಳುವದಾದರೆ ಸುದ್ದಿಯ ವ್ಯಾಖ್ಯಾಯೇ ಬದಲಾಗಿದೆ.
ಎಂಭತ್ತರ ದಶಕದ ಆರಂಭದಲ್ಲಿ ಈ ರಂಗಕ್ಕೆ ನಾನು ಪ್ರವೇಶ ಮಾಡಿದಾಗ ನಮ್ಮ ಜಮಾನದವರು ಮಾಡುತ್ತಿದ್ದ ಸುದ್ದಿ ಹಾಗೂ ಅದನ್ನು ಸಂಪಾದಕರು ನೋಡುವ ರೀತಿಯು
ಈಗಿನಕ್ಕಿಂತಲೂ ಭಿನ್ನವಾಗಿತ್ತು. ಆ ಸುದ್ದಿ ಪ್ರಕಟವಾದರೆ ಅದರಿಂದ ಆಗುವ ಪರಿಣಾಮ, ಸಮಾಜದ ಹಿತವನ್ನು ಸಂಪಾದಕರು ಮೊದಲು ನೋಡುತ್ತಿದ್ದರು. ಸುದ್ದಿಯೇದರೆ ಹೇಗಿರಬೇಕು, ಹೇಗೆ ಹಾಗೂ ಎಲ್ಲಿಂದ ಸುದ್ದಿ ಸಂಗ್ರಹಿಸಬೇಕು ಎಂಬುದರ ಮೇಲೆಯೇ ನಮಗೆ ದಿನವೂ ಪಾಠವಾಗುತ್ತಿತ್ತು. ಈಗ ಮಾಧ್ಯಮದಳ ಪೈಪೋಟಿಯಿಂದಾಗಿ ಸುದ್ದಿಗಳನ್ನು ಮೌಲ್ಯವನ್ನು ನಿರ್ಧರಿಸುವ ಅಳತೆಗೋಲೇ ಬೇರೆಯಾಗುತ್ತಿದೆ
ನಮ್ಮ ಜಮಾನಾದಲ್ಲಿ ಪತ್ರಿಕಾ ಪರಿಷತ್ತುಗಳಿಗೆ ಹೋಗಬೇಕಾದರೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಸ್ಥರು ಉತ್ತರಿಸಲು ಆಗದಂಥ ಪ್ರಶ್ನೆಗಳು ನಮ್ಮಿಂದ ಹೊರಬರುತ್ತಿದ್ದವು! ಈಗ ಪತ್ರಿಕಾ ಪರಿಷತ್ತಿನಲ್ಲಿ ಸಚಿವರು, ಶಾಸಕರಿಗೆ ಅನುಕೂಲವಾಗುವ ಪ್ರಶ್ನೆಗಳನ್ನು ಕೇಳುವ ” ಹೊಸ ಸಂಪ್ರದಾಯ ” ಆರಂಭವಾಗಿದೆ. ತನಿಖಾ ಪತ್ರಿಕೋದ್ಯಮ ಬಹುತೇಕ ನಿಂತೇ ಬಿಟ್ಟಿದೆ. ಸಚಿವರು ಹಾಗೂ ಅಧಿಕಾರಿಗಳು ನೀಡುವ ಹೇಳಿಕೆಗಳನ್ನು ನೀಟಾಗಿ ಪ್ರಕಟಿಸುವದೇ ಸುದ್ದಿಯಾಗಿದೆ.
ಒಂದು ಘಟನೆ ಅಥವಾ ಪ್ರಕರಣ ನಡೆದರೆ ಅದರ ಬೆನ್ನು ಹತ್ತಿ ನಿಜವಾದ ಸುದ್ದಿಯನ್ನು ಹೆಕ್ಕಿ ತೆಗೆಯುವದು ಈಗಲೂ ರಾಜ್ಯದಲ್ಲಿ ಅಲ್ಲಲ್ಲಿ ಕಾಣುತ್ತಿದೆ. ಕೆಲವೇ ಕೆಲವು ಪತ್ರಕರ್ತರು ಹಾಗೂ ಪತ್ರಿಕೆಗಳು ಇಂಥ ಮೌಲ್ಯಗಳನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.
ಸುದ್ದಿಯನ್ನು ಹೆಕ್ಕಿ ತೆಗೆಯುವದು ನಿಜವಾದ ಪತ್ರಿಕೋದ್ಯಮ ಅದೇ ಕಾಲಕ್ಕೆ ಕೆಲವೇ ಕೆಲವರು ಸೇರಿ ಸುದ್ದಿಯು ಹೊರಗೆ ಬರದಂತೆ ಮಾಡುವದು ಸಹ
ಇಂದಿನ ಪತ್ರಿಕೋದ್ಯಮದ ಇನ್ನೊಂದು ಮುಖ. ಸುದ್ದಿ ಮಾಡುವ ಸುದ್ದಿಗಾರರಿಗಿಂತಲೂ ಸುದ್ದಿ ಮಾಡದೇ ಸುದ್ದಿಯನ್ನು ಮುಚ್ಚಿ ಹಾಕುವವರಿಗೆ ಅಧಿಕಾರಸ್ಥರು ಮತ್ತು ಅಧಿಕಾರಿಗಳಿಂದ ಹೆಚ್ಚು ಶಭಾಷಗಿರಿ ಸಿಗುತ್ತದೆ!
ಪತ್ರಿಕೆಯ ಪ್ರಸಾರ ಹೆಚ್ಚಳ, TRP ಏರಿಕೆ ಇವೇ ಸುದ್ದಿ ಪ್ರಸಾರದ ಮಾನದಂಡಗಳಾಗಿವೆ. ಕಾಲ ಬದಲಾದಂತೆ ಸುದ್ದಿಯನ್ನು ಮೌಲ್ಯ ಹಾಗೂ ಸುದ್ದಿಯ ಪ್ರಸಾರಾವು ಹೊಸ ಹೊಸ ಆಯಾಮಗಳನ್ನು ಪಡೆಯುತ್ತಿವೆ.
ನಾನು ಎಂಭತ್ತರ ದಶಕದ ಪತ್ರಿಕೋದ್ಯಮವನ್ನು ಹೇಳುತ್ತಾ ಹೋದರೆ ಬಹಳಷ್ಟಿದೆ ಉಪವಾಸ ವನವಾಸ ಅನುಭವಿಸಿ ಎದುರಿಸಿ ಈ ರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ. ಎಂಭತ್ತರ ದಶಕದ ಕೊನೆಗೆ ಮುದ್ರಣ ಮತ್ತು ದಾಖಲೆಗಳ ಲ್ಯಾಮೀನೇಶನ್, ಗಣಕೀಕರಣ ಮತ್ತು ಬೈಂಡಿಂಗ ಉದ್ಯೋಗ ಆರಂಭಿಸಿದ್ದೇನೆ.
ಸುದ್ದಿ ಸಂಗ್ರಹ ಹಾಗೂ ಪ್ರಸಾರದಲ್ಲಿ ಸಮಾಜ ಮತ್ತು ಸಾಮಾನ್ಯ ಜನತೆಯ ಹಿತವಿರಲೆಎಂಬುದಷ್ಟೇ ನನ್ನ ಕಾಳಜಿ.
ಮಾಜಿ ಪತ್ರಕರ್ತನ್ನಾಗಿ ಈ ಮಾತುಗಳನ್ನು
ಬರೆದಿದ್ದೇನೆ.
ಅಶೋಕ ಚಂದರಗಿ
ಬೆಳಗಾವಿ
9620114466
ಇಂದು ವಿಶ್ವ ಸುದ್ದಿ ದಿನದ ಹಿನ್ನೆಲೆಯಲ್ಲಿ……. ಹಿರಿಯ ಕನ್ನಡ ಹೋರಾಟಗಾರರು, ಹಿರಿಯ ಪತ್ರಕರ್ತರು ಆದ ಅಶೋಕ ಚಂದರಗಿ ಅವರ ಒಡಲಾಳದ ಅನುಭವದ ಮಾತು
