ಬೆಳಗಾವಿ : ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ 2025-2026 ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ದಿನಾಂಕ 24-09-2025 ಬುಧವಾರದಂದು ಜೆ ಎನ್ ಎಂ ಸಿ ಆವರಣದಲ್ಲಿ ಇರುವ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಸಿ. ಬಸವರಾಜು, ಉಪಕುಲಪತಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಇವರು ಭಾಗವಹಿಸಿದ್ದರು. ಗೌರವ ಅತಿಥಿಗಳಾಗಿ ಸಂದೀಪ್ ಪಾಟೀಲ, ಪ್ರಧಾನ ದಿವಾನಿ ನ್ಯಾಯಾಧೀಶರು ಹಿರಿಯ ಶ್ರೇಣಿ ಹಾಗು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಬೆಳಗಾವಿಯ ಹಿರಿಯ ನ್ಯಾಯವಾದಿ ಆರ್.ಬಿ. ಬೆಲ್ಲದ ವಹಿಸಿಕೊಂಡಿದ್ದರು.
ಸಿ.ಬಸವರಾಜು, ಉಪಕುಲಪತಿಗಳು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದಿಂದ ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ನ್ಯಾಯವಾದಿಗಳಾಗಿ ಹೊರಹೊಮ್ಮಿ ಸಾಮಾಜಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯೋನ್ಮುಖರಾಗಬೇಕೆಂದು ಹಾಗೂ ಶೋಷಿತ ಜನರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕೆಂದು ಕರೆ ನೀಡಿದರು.
ಸಾಂವಿಧಾನಿಕ ಮೌಲ್ಯಗಳನ್ನು ಸಾಕಾರಗೊಳಿಸುವುದು ಹಾಗೂ ನೊಂದ ಶೋಷಿತ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಕಾರ್ಯದಲ್ಲಿ ಕಾನೂನು ವಿದ್ಯಾರ್ಥಿಗಳ ನ್ಯಾಯವಾದಿಗಳ ಹಾಗೂ ನ್ಯಾಯಾಲಯಗಳ ಪಾತ್ರವು ಪ್ರಮುಖವಾಗಿದೆ ಎಂದರು.
ಸಂದೀಪ ಪಾಟೀಲ, ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬೆಳಗಾವಿ ಮಾತನಾಡಿ, ಕಾನೂನು ಸೇವೆಗಳ ಪ್ರಾಧಿಕಾರ ಕೊಡಮಾಡುವ ಉಚಿತ ಸೇವೆಗಳನ್ನು ಜನರು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ವಿಶ್ಲೇಷಿಸಿ, ಕಾನೂನು ವಿದ್ಯಾರ್ಥಿಗಳು ತಮ್ಮ ಕಲಿಕಾ ಸಮಯದಿಂದಲೇ ಸಾಮಾಜಿಕ ಅವಶ್ಯಕತೆಗಳನ್ನು ಅರಿತುಕೊಂಡು ಶೋಷಣೆಗೆ ಒಳಗಾದ ಜನರನ್ನು ಕಾನೂನು ಸೇವೆಗಳ ಪ್ರಾಧಿಕಾರದ ಸಂಯೋಗದೊಂದಿಗೆ ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯವುವಾಗಿ ಜನಸೇವೆಯನ್ನು ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಆರ್.ಬಿ. ಬೆಲ್ಲದ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಥೆಯು ಕೊಡ ಮಾಡುವ ವಿಶ್ವಮಟ್ಟದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು, ಮಹಾವಿದ್ಯಾಲಯವು ಆಯೋಜಿಸುವ ಎಲ್ಲ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಇತ್ತೇಬಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಜಿ ಹಿರೇಮಠ ಸ್ವಾಗತಿಸಿದ್ದರು. ಡಾ.ಸಂತೋಷ ಆರ್. ಪಾಟೀಲ ಪರಿಚಯಿಸಿದರು. ಸಾಯಿರಾಜ್ ಅಂಬಲೆ ಅಂತಿಮ ವರ್ಷದ ಬಿಎಎಲ್ಬಿ, ಮಹಾವಿದ್ಯಾಲಯದ ವಿದ್ಯಾರ್ಥಿ ಕಾರ್ಯದರ್ಶಿ ವಂದಿಸಿದರು. ಪ್ರೇರಣಾ ಹನುಮ್ ಶೇಟ್ ದ್ವಿತೀಯ ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ, ಗಾಯತ್ರಿ ಹಡಗಲಿ ನಾಲ್ಕನೇ ವರ್ಷದ ಬಿ ಎ ಎಲ್ ಎಲ್ ಬಿ ವಿದ್ಯಾರ್ಥಿನಿ ನಿರೂಪಿಸಿದರು.