ಬೆಳಗಾವಿ : ನಾಟಕ ಮನುಷ್ಯನ ಅಭಿವ್ಯಕ್ತಿಯ ಅತ್ಯುನ್ನತ ಕಲೆ. ಅದು ಮನುಷ್ಯನಲ್ಲಿ ಮೌಲ್ಯ ಮತ್ತು ವಿಚಾರಗಳನ್ನು ಹೆಚ್ಚಿಸುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಸೆ. 23ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಾಹಿತ್ಯ ಮತ್ತು ಇತರ ಕಲೆಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಾಟಕ ಮತ್ತು ಸಿನಿಮಾಗಳು ದ್ರಶ್ಯ ಮತ್ತು ಶ್ರವ್ಯ ಪ್ರಯೋಗಗಳಾಗಿದ್ದರಿಂದ ಮಕ್ಕಳ ಮೇಲೆ ನೇರವಾಗಿ ಪ್ರಭಾವ ಬೀರುತ್ತವೆ. ಒಬ್ಬ ಕಲಾವಿದ ಜಗತ್ತು ಹೇಗಿದೆ ಹಾಗೆ ನೋಡದೆ, ಜಗತ್ತು ಹೀಗೆ ಇರಬೇಕು ಎಂದು ಚಿತ್ರಿಸುತ್ತಾನೆ. ಅದು ಅವನ ಕಲಾ ವೈಶಿಷ್ಟ್ಯ. ಅಭಿನಯ ಮನುಷ್ಯನ ಅದ್ಭುತವಾದ ಕಲೆಯಾಗಿದೆ. ಮನುಷ್ಯನಿಗೆ ನಾಟಕ ಸಾವಯವ ಸಂಬಂಧವನ್ನು ಗುರುತಿಸುತ್ತದೆ.
ಮನುಷ್ಯನ ಕಲಿಕೆಗೆ ಯಾವುದೇ ವಯೋಮಿತಿ ಇಲ್ಲ, ಮಗುವಿನ ರೀತಿಯಲ್ಲಿ ಕಲಿಯುವ ಸ್ವಭಾವ ಇರಬೇಕು. ಅವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ರಂಗಭೂಮಿ ವ್ಯಕ್ತಿಗೆ ಮಾತನಾಡುವ ಕಲೆಯನ್ನು ಕಲಿಸುತ್ತದೆ. ಆಂಗಿಕ ಹಾವಭಾವ ಬಳಸುವುದನ್ನು ಕಲಿಸುತ್ತದೆ. ಸಾಹಿತ್ಯವು ಮನುಷ್ಯನ ಬದುಕಿನ ಘಟನೆಗಳನ್ನು , ಸಿನಿಮಾ ರಂಗವು ಅದಕ್ಕೆ ಜೀವ ತುಂಬುವ ಕೆಲಸ ಮಾಡುತ್ತದೆ. ಇಂದಿನ ಕೆಲವು ಸಿನಿಮಾಗಳು ಮೂಲತಃ ರಂಗಭೂಮಿಯ ನಾಟಕಗಳಾಗಿಯೇ ಪ್ರಯೋಗ ಗೊಂಡವುಗಳು. ಬದುಕು ಕಟ್ಟಿಕೊಳ್ಳುವುದಕ್ಕೆ ರಂಗಭೂಮಿಯಲ್ಲಿ ಸಾಕಷ್ಟು ಅವಕಾಶಗಳಿವೆ. ಆದ್ದರಿಂದ ವಿದ್ಯಾರ್ಥಿಗಳು ರಂಗಭೂಮಿಯತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯಬೇಕು. ತಮಗೆ ಇಷ್ಟವಾದ ಕ್ಷೇತ್ರದಲ್ಲಿ ಮುಂದುವರಿಯುವುದರಿಂದ ಅವರು ತಮ್ಮ ಪ್ರತಿಭೆಯ ಮೂಲಕ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ.
ಇವುಗಳ ಜೊತೆಗೆ ನೃತ್ಯ, ಹಾಡುಗಾರಿಕೆ, ವಾದ್ಯ ನುಡಿಸುವುದು ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ವಿಫುಲವಾದ ಅವಕಾಶಗಳಿವೆ ಎಂದರು.
ಉಪ ಪ್ರಾಚಾರ್ಯ ಡಾ. ಅರ್ಜುನ ಜಂಬಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಉತ್ತಮ ಉಪನ್ಯಾಸ , ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವುದರಿಂದ ಅವರು ತಮ್ಮ ಕಾರ್ಯಕ್ಷೇತ್ರಗಳನ್ನು ತುಂಬಾ ಸಲೀಸಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಸಾಹಿತ್ಯ ಮತ್ತು ಕಲೆ ಮನುಷ್ಯನಲ್ಲಿ ಮನುಷ್ಯತ್ವವನ್ನು ಅರಳಿಸುತ್ತದೆ ಎಂದರು.
ಡಾ. ಸಾವುಕಾರ ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಜೋಗಿನಕಟ್ಟಿ ಪ್ರಿಯಾಂಕಾ ಪರಿಚಯಿಸಿದರು. ಪ್ರಿಯಾಂಕಾ ತಿಲಗಾರ ಸ್ವಾಗತಿಸಿದರು. ಲಕ್ಷ್ಮಿ, ಹೊನಗೌಡರ್ ನಿರುಪಿಸಿದರು , ಪ್ರವೀಣಕುಮಾರ ತಿಗಡಿ ವಂದಿಸಿದರು ಕನ್ನಡ ವಿಭಾಗದ ಉಪನ್ಯಾಸಕ ಡಾ. ವೈ. ಎ. ಜಕ್ಕಣ್ಣವರ, ಡಾ. ನಾರಾಯಣ ನಾಯ್ಕ, ಡಾ. ಮಹಾಂತೇಶ ದುರಗಣ್ಣವರ ಉಪಸ್ಥಿತರಿದ್ದರು. ಇತರ ವಿಭಾಗಗಳ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.