ಬೆಳಗಾವಿ : ವಂಚನೆ ಮಾಡುವವರು ಜನರನ್ನು ಯಾಮಾರಿಸುವುದು ಹೊಸದಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇದೀಗ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ ವಂಚಿಸಿ ಪರಾರಿಯಾದವರನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೊಯೋಟಾ ಕಂಪನಿಯ ಬಿಳಿ ಬಣ್ಣದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮನೆಯ ಬಳಿ ಬಂದು ಬ್ಯಾಗ್ ನಲ್ಲಿ ಹಳೆ ಬಟ್ಟೆ ಹಾಕಿ ಅದರಲ್ಲಿ ಹಣ ಇದೆ ಎಂದು ನಂಬಿಸಿ ಹಣ ತೆಗೆದುಕೊಂಡು ಪರಾರಿಯಾದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 12 ರ ಸಂಜೆ 7:00 ಗಂಟೆ ಸುಮಾರಿಗೆ ಮಹಿಳೆ ಮತ್ತು ಮೂವರು ಪುರುಷರು ನಮಗೆ ಹಣ ಕೊಟ್ಟರೆ ಅದಕ್ಕೆ ಡಬಲ್ ಹಣ ಕೊಡುವುದಾಗಿ ಹೇಳಿ ಅಮಸಿದ್ದ ಹಣಮಂತ ಪೂಜಾರಿ ಅವರಿಂದ 17, 50, 000 ರೂ. ಹಣವನ್ನು ತೆಗೆದುಕೊಂಡು ಈ ಬ್ಯಾಗಿನಲ್ಲಿ ಒಟ್ಟು 34 ಲಕ್ಷ ರೂ. ಹಣ ಇದೆ, ಮನೆಯ ಒಳಗಡೆ ಹೋಗಿ ನೋಡಿ ಎಂದು ನಂಬಿಕೆ ದ್ರೋಹ ಮಾಡಿ ಮೋಸ ಮಾಡಿದ್ದರು. ಈ ಬಗ್ಗೆ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಬೆಳಗಾವಿ ಎಸ್ ಪಿ ಪರಾರಿ ಆದವರ ಪತ್ತೆಗೆ ತಂಡವನ್ನು ರಚಿಸಿದ್ದರು.
ಪೊಲೀಸರು ಆರೋಪಿಗಳಾದ ಸಾ: ಘಟಪ್ರಭಾ ಮಲ್ಲಾಪುರದ ಹಾಲಿ ಕೊಲ್ಲಾಪುರ ಜವ್ಹಾರನಗರ ಸಾಯಿ ಮಂದಿರ ಬಳಿಯ ಮಾಧುರಿ ಪೂವಲನ ಮೆಹರೂನ ಅಲ್ತಾಫ್ ಸರ್ಕವಾಸ್(48), ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಕಮಡೊಳ್ಳಿಯ ಇಮಾಮಸಾಬ ರಾಜೇಸಾಬ ದರೂಬಾಯಿ(34), ಸಾಂಗಲಿ ಜಿಲ್ಲೆ ಡಿಗ್ರಜನ ಅಕ್ಷಯ ಶಾಂತಿನಾಥ ಅವಟಿ(30)ಮತ್ತು ಕೊಲ್ಲಾಪುರ ಜಿಲ್ಲೆ ಪನ್ಹಾಳ ತಾಲೂಕಿನ ಪೊಹಾಳಿಯ ವಿಶ್ವಾಸ ಹರಿ ಪಾಟೀಲ (40) ಇವರನ್ನು ಸೆಪ್ಟೆಂಬರ್ 17ರಂದು ಬಂಧಿಸಿ ಹಣ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಡಬಲ್ ಹಣ ಹಾಕಿದ್ದೇವೆ ಮನೆಯ ಒಳಗಡೆ ಹೋಗಿ ನೋಡಿ ಎಂದು ಯಾಮಾರಿಸಿ ಪರಾರಿಯಾದವರು ಕೊನೆಗೂ ಸೆರೆ
